ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ರೈಲ್ವೆ ಅಧಿಕಾರಿಗಳು ಆಡಳಿತಾತ್ಮಕ ಅನುಕೂಲಕ್ಕಾಗಿ ಕನ್ನಡ ಭಾಷೆಯನ್ನು ಕಲಿಯಲು ಪ್ರಯತ್ನಿಸಬೇಕು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಸಲಹೆ ನೀಡಿದ್ದಾರೆ.
ಮಂಗಳೂರಿನಲ್ಲಿ ಬುಧವಾರ ರೈಲ್ವೆ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ನಾನು ಚಿಕ್ಕವನಿದ್ದಾಗ ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ ನಡೆಸಿ ಜೈಲು ಪಾಲಾಗಿದ್ದೆ. ಆದರೆ ಈಗ ನನಗೆ ಹಿಂದಿಯ ಮಹತ್ವದ ಅರಿವಾಗಿದೆ. ಪ್ರತಿನಿತ್ಯ ಬೆಳಗ್ಗೆ 6 ಗಂಟೆಗೆ ಎದ್ದು ಹಿಂದಿಯಲ್ಲಿ ಅಕ್ಷರ ಬರೆಯಲು ಕಲಿಯುತ್ತಿರುವುದಾಗಿ ತಿಳಿಸಿದರು.
ಇನ್ನು ಆರು ತಿಂಗಳಲ್ಲಿ ಹಿಂದಿ ಕಲಿತು ಪತ್ರ ಬರೆಯಲು ಹಾಗೂ ಸಂಸತ್ತಿನಲ್ಲಿ ಭಾಷಣ ಮಾಡುವುದನ್ನು ಕಲಿಯುತ್ತೇನೆ ಎಂದ ಸೋಮಣ್ಣ, ರೈಲ್ವೆ ಅಧಿಕಾರಿಗಳು ಕನ್ನಡ ಕಲಿಯುವುದು ಕಷ್ಟವಲ್ಲ, ಅವರು ಭಾಷೆ ಕಲಿಯಲು ಸಾಮಗ್ರಿಗಳನ್ನು ಒದಗಿಸುವಂತೆ ಸ್ಥಳದಲ್ಲಿದ್ದ ಶಾಸಕರಿಗೆ ಸೂಚಿಸಿದರು.
ಸಂಸದ ಬ್ರಿಜೇಶ್ ಚೌಟ ಮಾತನಾಡಿ, ‘ಹೊರಗಿನವರು ಕೆಲಸ ಕಿತ್ತುಕೊಳ್ಳುತ್ತಿದ್ದಾರೆ ಎಂಬ ಭಾವನೆ ಹೋಗಲಾಡಿಸಲು ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ರೈಲ್ವೆ ಅಧಿಕಾರಿಗಳು ಕನ್ನಡ ಕಲಿಯಬೇಕು. ಕನ್ನಡ ಬಲ್ಲ ಅನೇಕ ಅಧಿಕಾರಿಗಳಿದ್ದಾರೆ, ಕನ್ನಡ ಭಾಷೆ ಗೊತ್ತಿರುವವರನ್ನು ಕೆಲಸಕ್ಕೆ ನೇಮಿಸಬೇಕು, ಇಲ್ಲವೇ ಇಲ್ಲಿ ಕೆಲಸ ಮಾಡುವವರು ಕನ್ನಡ ಕಲಿಯಬೇಕು ಎಂದು ಹೇಳಿದರು.