ಬೆಂಗಳೂರು: ಕರ್ನಾಟಕ ವಿಧಾನಪರಿಷತ್ನ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರೆ ಮಾಡಿ ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು, ಈ ಬೆಳವಣಿಗೆಯಿಂದ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಆಕ್ರೋಶ ಹಾಗೂ ಬೇಸರ ಹೊರಹಾಕಿದ್ದಾರೆ.
ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, “ಮಧ್ಯಾಹ್ನ ಮುಖ್ಯಮಂತ್ರಿಗಳು ನನಗೆ ಕರೆ ಮಾಡಿ ಹುದ್ದೆಗೆ ರಾಜೀನಾಮೆ ನೀಡುವಂತೆ ತಿಳಿಸಿದರು. ನೀವು ಪಕ್ಷದ ಪರವಾಗಿ ಆಯ್ಕೆಯಾಗಿದ್ದೀರಿ, ಹಾಗಾಗಿ ರಾಜೀನಾಮೆ ನೀಡಿ ಎಂದು ಹೇಳಿದರು.
ಆದರೆ ನನ್ನ ವಿರುದ್ಧ ಅವರಿಗೆ ಅಸಮಾಧಾನವಿದ್ದರೆ ಸದನದಲ್ಲೇ ನಿಯಮಾನುಸಾರ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿ,” ಎಂದು ಸ್ಪಷ್ಟವಾಗಿ ತಿರುಗೇಟು ನೀಡಿದ್ದಾರೆ.
ರಾಜ್ಯ ರಾಜಕಾರಣದ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, “ಇದು ಅತ್ಯಂತ ಕಲುಷಿತ ರಾಜಕಾರಣ. ಈ ನಡವಳಿಕೆಯಿಂದ ನನ್ನ ಮನಸ್ಸಿಗೆ ತೀವ್ರ ನೋವಾಗಿದೆ. ವಿಧಾನಪರಿಷತ್ ಸಭಾಪತಿ ಅಥವಾ ವಿಧಾನಸಭೆಯ ಸ್ಪೀಕರ್ ಹುದ್ದೆಗಳು ಪಕ್ಷದ ಹಂಗಿಲ್ಲದ ಉನ್ನತ ಸಾಂವಿಧಾನಿಕ ಹುದ್ದೆಗಳು. ಯಾವುದೇ ಸಭಾಪತಿಯೂ ಪಕ್ಷದ ‘ಲೆಟರ್ ಹೆಡ್’ ಆಧಾರದ ಮೇಲೆ ಆಯ್ಕೆಯಾಗುವುದಿಲ್ಲ. ರಾಜ್ಯದ ಸಂಸದೀಯ ಇತಿಹಾಸದಲ್ಲೇ ಇಂತಹ ಘಟನೆ ಎಂದೂ ನಡೆದಿರಲಿಲ್ಲ,” ಎಂದು ಬೇಸರ ವ್ಯಕ್ತಪಡಿಸಿದರು.
ನೋಟಿಸ್ ನೀಡಲಿ, ಸೂಕ್ತ ಉತ್ತರ ಕೊಡುವೆ
ತಮ್ಮ ಸುದೀರ್ಘ ರಾಜಕೀಯ ಜೀವನವನ್ನು ಸ್ಮರಿಸಿದ ಬಸವರಾಜ ಹೊರಟ್ಟಿ, “ನನ್ನ ಇಷ್ಟೂ ವರ್ಷಗಳ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ಪ್ರಸ್ತುತ ಯಾವ ಕಾರಣಕ್ಕಾಗಿ ನನ್ನ ರಾಜೀನಾಮೆ ಕೇಳುತ್ತಿದ್ದಾರೆ ಎಂಬುದು ಅತ್ಯಂತ ಮುಖ್ಯವಾಗುತ್ತದೆ. ಸರ್ಕಾರ ನನಗೆ ಅಧಿಕೃತವಾಗಿ ನೋಟಿಸ್ ನೀಡಲಿ, ಅದಕ್ಕೆ ನಾನು ಸೂಕ್ತವಾಗಿಯೇ ಉತ್ತರ ನೀಡುತ್ತೇನೆ,” ಎಂದು ಸಿಎಂ ನಡೆಯನ್ನು ಖಂಡಿಸಿದ್ದಾರೆ.
