Trending

ಪ್ರೇಮ ವಿವಾಹ ಮಾಡಿಕೊಂಡ ಮಗಳನ್ನು ಮನೆಗೆ ಕರೆತರಲು ಕಾಲು ಹಿಡಿದು ಕಣ್ಣೀರಿಟ್ಟ ಪೋಷಕರು

Spread the love

ತಿರುಪ್ಪತ್ತೂರು : ತಮಿಳುನಾಡಿನ ತಿರುಪ್ಪತ್ತೂರು ಜಿಲ್ಲೆಯಲ್ಲಿ ಪ್ರೇಮ ವಿವಾಹ ಮಾಡಿಕೊಂಡ ಯುವತಿಯನ್ನು ಮನೆಗೆ ಕರೆತರಲು ಪೋಷಕರು ಆಕೆಯ ಕಾಲು ಹಿಡಿದು ಕಣ್ಣೀರು ಹಾಕಿ ಬೇಡಿಕೊಂಡ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ತಿರುಪ್ಪತ್ತೂರು ಜಿಲ್ಲೆಯ ಜೋಲಾರ್ಪೇಟೆ ಸಮೀಪದ ಕಟ್ಟೇರಿ ಲಾರಿ ಶೆಡ್ ಪ್ರದೇಶದ ನಿವಾಸಿಗಳಾದ ಕಾಳಿ ಮತ್ತು ಪ್ರವೀಣಾ ದಂಪತಿಯ ಪುತ್ರಿ ದಿವ್ಯದರ್ಶಿನಿ (19) ಕೃಷ್ಣಗಿರಿಯ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಳೆದ ಮೂರು ವರ್ಷಗಳಿಂದ ಅಮ್ಮಯ್ಯಪ್ಪನ್ ನಗರದ ನಿವಾಸಿ ಪೆರುಮಾಳ್ (23) ಅವರನ್ನು ಪ್ರೀತಿಸುತ್ತಿದ್ದರು.

ಈ ಸಂಬಂಧಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರೂ, ದಿವ್ಯದರ್ಶಿನಿ ಜುಲೈ 4ರಂದು ಮನೆಯಿಂದ ತೆರಳಿ ಪೆರುಮಾಳ್ ಅವರನ್ನು ವಿವಾಹವಾಗಿದ್ದಾರೆ. ಬಳಿಕ ರಕ್ಷಣೆ ಕೋರಿ ದಂಪತಿ ತಿರುಪ್ಪತ್ತೂರು ಮಹಿಳಾ ಪೊಲೀಸ್ ಠಾಣೆಗೆ ಆಶ್ರಯ ಪಡೆದಿದ್ದರು.

ರಾಜಿ ಮಾತುಕತೆಗಾಗಿ ಎರಡೂ ಕುಟುಂಬಗಳನ್ನು ಠಾಣೆಗೆ ಕರೆಸಿದ ವೇಳೆ, ಮಗಳನ್ನು ಕಂಡ ಪೋಷಕರು ಭಾವುಕರಾಗಿ, “ನಮ್ಮ ಜೊತೆ ಮನೆಗೆ ಬಾ” ಎಂದು ಕಾಲು ಹಿಡಿದು ಕಣ್ಣೀರಿಟ್ಟು ಮನವಿ ಮಾಡಿದರು. ಆದರೆ ದಿವ್ಯದರ್ಶಿನಿ ತನ್ನ ಪತಿಯೊಂದಿಗೇ ಇರಲು ನಿರ್ಧರಿಸಿದ್ದಾಗಿ ತಿಳಿಸಿದರು.

ಇದರಿಂದ ಮನನೊಂದ ಪೋಷಕರು ಮತ್ತು ಸಂಬಂಧಿಕರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ಉದ್ವಿಗ್ನಗೊಂಡಿದ್ದರೂ, ದಿವ್ಯದರ್ಶಿನಿ ವಯಸ್ಕಳಾಗಿದ್ದು ತನ್ನ ಇಚ್ಛೆಯಂತೆ ಬದುಕುವ ಹಕ್ಕನ್ನು ಗೌರವಿಸಿದ ಪೊಲೀಸರು, ರಾತ್ರಿ ಆಕೆಯನ್ನು ಪತಿ ಪೆರುಮಾಳ್ ಅವರೊಂದಿಗೆ ಕಳುಹಿಸಿದರು.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರೇಮ ವಿವಾಹ, ಪೋಷಕರ ಭಾವನೆ ಮತ್ತು ವಯಸ್ಕರ ವೈಯಕ್ತಿಕ ಆಯ್ಕೆಯ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

 

[pj-news-ticker]