Trending

ಶಿವಮೊಗ್ಗ: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

Spread the love

ಶಿವಮೊಗ್ಗ: ಮನೆಗೆ ಬೀಗ ಹಾಕಿ ಕೆಲಸಕ್ಕೆ ತೆರಳಿದ್ದ ವೇಳೆ ದುಷ್ಕರ್ಮಿಗಳು ಬಾಗಿಲು ಒಡೆದು ಒಳನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಹಣ ಹಾಗೂ ಮೊಬೈಲ್ ಫೋನ್ ಕಳವು ಮಾಡಿರುವ ಘಟನೆ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ವಾಜಪೇಯಿ ಲೇಔಟ್‌ನ ಇ-ಬ್ಲಾಕ್‌ನಲ್ಲಿ ಇರುವ ನಿವಾಸದಲ್ಲಿ ಮಾರುತಿ ತಮ್ಮ ತಾಯಿ ರೇಣುಕಾ ಅವರೊಂದಿಗೆ ವಾಸವಾಗಿದ್ದರು. ಮೇ 26ರಂದು ಬೆಳಿಗ್ಗೆ ರೇಣುಕಾ ಅವರು ಸಮೀಪದ ಇಪಿಎಫ್ ಕಚೇರಿಗೆ ಹೌಸ್ ಕೀಪಿಂಗ್ ಕೆಲಸಕ್ಕೆ ತೆರಳಿದ್ದರು. ನಂತರ ಬೆಳಗ್ಗೆ ಸುಮಾರು 9 ಗಂಟೆ ವೇಳೆಗೆ ಮಾರುತಿ ಅವರು ಮನೆಗೆ ಬೀಗ ಹಾಕಿ ಕೆಲಸಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ.

ಸಂಜೆ ಸುಮಾರು 5 ಗಂಟೆ ವೇಳೆಗೆ ಮಾರುತಿ ಮನೆಗೆ ಮರಳಿದಾಗ ಮನೆಯ ಬಾಗಿಲು ಒಡೆದಿರುವುದು ಗಮನಕ್ಕೆ ಬಂದಿದೆ. ಅನುಮಾನಗೊಂಡು ಮನೆಯೊಳಗೆ ಪ್ರವೇಶಿಸಿದಾಗ ಬೀರೋ ಮುರಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ತಕ್ಷಣ ತಾಯಿಗೆ ಮಾಹಿತಿ ನೀಡಿದ್ದಾರೆ.

ಮನೆಯಲ್ಲಿದ್ದ ವಸ್ತುಗಳನ್ನು ಪರಿಶೀಲಿಸಿದ ವೇಳೆ ಸುಮಾರು ₹90 ಸಾವಿರ ನಗದು, ₹2.50 ಲಕ್ಷ ಮೌಲ್ಯದ ಬಂಗಾರದ ಆಭರಣಗಳು ಹಾಗೂ ₹25 ಸಾವಿರ ಮೌಲ್ಯದ Samsung Galaxy smartphone ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಒಟ್ಟು ಸುಮಾರು ₹3.65 ಲಕ್ಷ ಮೌಲ್ಯದ ಆಸ್ತಿ ಕಳುವಾಗಿರುವುದಾಗಿ ಅಂದಾಜಿಸಲಾಗಿದೆ.

ಘಟನೆ ಸಂಬಂಧ ತುಂಗಾನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಮನೆಯವರ ದಿನಚರಿ ಹಾಗೂ ಚಲನವಲನವನ್ನು ಗಮನಿಸಿ ಕಳ್ಳರು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

[pj-news-ticker]