ಭದ್ರಾವತಿ: ಕುವೆಂಪು ವಿಶ್ವವಿದ್ಯಾನಿಲಯಯ ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ ವತಿಯಿಂದ ಸಿದ್ದಾರ್ಥ ಅಂಧರ ಕೇಂದ್ರದ ವಿದ್ಯಾರ್ಥಿಗಳಿಗೆ ಯೋಗ ಮತ್ತು ಪ್ರಾಣಾಯಾಮ ತರಬೇತಿ ಯಶಸ್ವಿಯಾಗಿ ಪೂರ್ಣಗೊಂಡಿದೆ.
ವಿಶ್ವವಿದ್ಯಾನಿಲಯದ ದ್ವಿತೀಯ ವರ್ಷದ ಎಂ.ಪಿ.ಎಡ್ ವಿದ್ಯಾರ್ಥಿನಿ ಕುಮಾರಿ ಎನ್.ಜಿ. ಚೈತ್ರ ಅವರು ತಮ್ಮ ಪ್ರಾಜೆಕ್ಟ್ ವರ್ಕ್ ಅಂಗವಾಗಿ ಭದ್ರಾವತಿಯ ನ್ಯೂಟೌನ್ನ ಸಿದ್ದಾರ್ಥ ಅಂಧರ ಕೇಂದ್ರದ 12 ಮಂದಿ ಅಂಧ ವಿದ್ಯಾರ್ಥಿಗಳಿಗೆ ಏಪ್ರಿಲ್ 8ರಿಂದ ಮೇ 17ರವರೆಗೆ ಆರು ವಾರಗಳ ಕಾಲ ಯೋಗ ಮತ್ತು ಪ್ರಾಣಾಯಾಮ ತರಬೇತಿ ನೀಡಿದರು.
ಈ ಕುರಿತು ಮಾತನಾಡಿದ ಚೈತ್ರ, “ದೃಷ್ಟಿ ವಿಕಲಚೇತನರು ಸೇರಿದಂತೆ ಎಲ್ಲಾ ರೀತಿಯ ಅಂಗವಿಕಲರು ಯೋಗ ಮತ್ತು ಪ್ರಾಣಾಯಾಮ ಕಲಿಯಲು ಸಮರ್ಥರಾಗಿದ್ದಾರೆ. ಇದು ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸಲು ಸಹಕಾರಿಯಾಗುತ್ತದೆ” ಎಂದು ತಿಳಿಸಿದರು.
ತರಬೇತಿ ಸಮಾರೋಪ ಸಮಾರಂಭದಲ್ಲಿ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಅವರು ಚೈತ್ರ ಅವರ ಸೇವೆಯನ್ನು ಶ್ಲಾಘಿಸಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ರಿಲಯನ್ಸ್ ಬಿಸ್ಕೆಟ್ಸ್ ಅಂಡ್ ಕನ್ಫೆಕ್ಷನರೀಸ್ ಕಂಪನಿಯ ಅಶೋಕ್ ಕುಮಾರ್, ಎಂ.ಪಿ.ಎಡ್ ವಿದ್ಯಾರ್ಥಿಗಳಾದ ಸುಶ್ಮಿತ ಹಾಗೂ ಮನು ಉಪಸ್ಥಿತರಿದ್ದರು. ಕೇಂದ್ರದ ಕ್ಷೇತ್ರಾಧಿಕಾರಿ ಎಸ್. ಸೃಷ್ಟಿ ಸ್ವಾಗತಿಸಿ ವಂದಿಸಿದರು.
