ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಣಾಮ ಕಚ್ಚಾತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಇಂದಿನಿಂದ ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 3 ರೂ. ಹೆಚ್ಚಳ ಮಾಡಲಾಗಿದೆ.
ಇದರ ಬೆನ್ನಲ್ಲೇ ರಾಜ್ಯದ ಪ್ರಯಾಣಿಕರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್ ತಗುಲಿದ್ದು, ಖಾಸಗಿ ಬಸ್ ಟಿಕೆಟ್ ದರಗಳು ಕೂಡ ದಿಢೀರ್ ಏರಿಕೆಯಾಗಿವೆ. ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರಗಳು ಜಾರಿಗೆ ಬರಲಿದೆ.
ಪೆಟ್ರೋಲ್-ಡೀಸೆಲ್, ಅಗತ್ಯ ವಸ್ತುಗಳು ಸೇರಿ ವಿವಿಧ ವಸ್ತುಗಳ ಬೆಲೆ ಗಗನಕ್ಕೇರಿವೆ. ಇದೀಗ ಬಸ್ ಟಿಕೆಟ್ ದರ ಕೂಡ ಹೆಚ್ಚಿದ್ದು, ಪ್ರಯಾಣಿಕರಿಗೆ ಮತ್ತಷ್ಟು ಹೊರೆಯಾಗಿದೆ. ಲಕ್ಷಾಂತರ ನಗರ ನಿವಾಸಿಗಳು ದೂರದ ಊರುಗಳಿಗೆ ಹೋಗಲು ಖಾಸಗಿ ಬಸ್ ಮೊರೆ ಹೋಗುತ್ತಾರೆ. ಈ ಪ್ರಯಾಣಿಕರಿಗೆ ಇದೀಗ ಟಿಕೆಟ್ ಬೆಲೆ ಏರಿಕೆ ಬಿಸಿ ತಟ್ಟಲಿದೆ.
ಶೇ. 20 ರಿಂದ 30 ರಷ್ಟು ಹೆಚ್ಚಳ!
ಪೆಟ್ರೋಲ್-ಡೀಸೆಲ್ ಬೆಲೆ 3 ರೂಪಾಯಿ ಏರಿಕೆಯಾಗುತ್ತಿದ್ದಂತೆ ಖಾಸಗಿ ಬಸ್ ಮಾಲೀಕರು ಸಭೆ ನಡೆಸಿದ್ದು, ಟಿಕೆಟ್ ದರವನ್ನು ಏರಿಕೆ ಮಾಡಲು ನಿರ್ಧರಿಸಿದ್ದಾರೆ. ಶೇ. 20 ರಿಂದ 30 ರಷ್ಟು ದರ ಏರಿಕೆಗೆ ಖಾಸಗಿ ಬಸ್ ಮಾಲೀಕರು ಮುಂದಾಗಿದ್ದು, ಟಿಕೆಟ್ ಭಾರೀ ಹೆಚ್ಚಳವಾಗಲಿದೆ.
