ಚೆನ್ನೈ: ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ಹೊಸ ಶಕೆ ಆರಂಭವಾಗಿದೆ. ‘ದಳಪತಿ’ ವಿಜಯ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ರಾಜ್ಯಾದ್ಯಂತ ಸಂಭ್ರಮ ಮನೆಮಾಡಿದೆ. ‘ಟಿವಿಕೆʼ ದ್ರಾವಿಡ ನೆಲೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಇದೇ ಸಂದರ್ಭದಲ್ಲಿ, ಸಿಎಂ ಆಗಿ ವಿಜಯ್ ಪಡೆಯಲಿರುವ ಸಂಬಳ ಮತ್ತು ಭತ್ಯೆಗಳ ಬಗ್ಗೆ ಚರ್ಚೆ ಶುರುವಾಗಿದೆ. ಒಬ್ಬ ಮುಖ್ಯಮಂತ್ರಿಗೆ ಸಿಗುವ ವೇತನವೆಷ್ಟು? ಸಚಿವರು ಮತ್ತು ಶಾಸಕರಿಗೆ ಮಾಸಿಕ ಎಷ್ಟು ಸಂಬಳ ಸಿಗುತ್ತದೆ? ಅವರ ಆದಾಯದ ಮೇಲೆ ತೆರಿಗೆಯನ್ನು ಹೇಗೆ ವಿಧಿಸಲಾಗುತ್ತದೆ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಪ್ರಸ್ತುತ ಅಂಕಿಅಂಶಗಳ ಪ್ರಕಾರ, ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಿಂದ ಹಿಡಿದು ಶಾಸಕರವರೆಗೆ ದೊರೆಯುತ್ತಿರುವ ಅಧಿಕೃತ ವೇತನದ ವಿವರಗಳು ಹೀಗಿವೆ..
ಮುಖ್ಯಮಂತ್ರಿ : ಸಿಎಂ ವಿಜಯ್ ತಿಂಗಳಿಗೆ ಸುಮಾರು ₹2.85 ಲಕ್ಷದಿಂದ ₹3 ಲಕ್ಷದವರೆಗೆ ಸಂಬಳವನ್ನು ಪಡೆಯಲಿದ್ದಾರೆ. ಆ ಪೈಕಿ 1.05 ಲಕ್ಷ ರೂ. ಮೂಲ ವೇತನ ಆದರೆ , 87,000 ರೂ. ಕ್ಷೇತ್ರ ಭತ್ಯೆ ಮತ್ತು 75,000 ರೂ. ಕಚೇರಿ ಭತ್ಯೆಯನ್ನು ಒಳಗೊಂಡಿರುತ್ತದೆ. ಈ ಮೂಲಕ ವರ್ಷಕ್ಕೆ 34 ಲಕ್ಷ ಹಣವನ್ನು ವಿಜಯ್ ದುಡಿಯಲಿದ್ದಾರೆ ಎಂದು ವರದಿ ತಿಳಿಸಿದೆ.
ಸಚಿವರು: ಇವರಿಗೂ ಮುಖ್ಯಮಂತ್ರಿಗೆ ಸಮನಾಗಿ ಅಥವಾ ಸ್ವಲ್ಪ ಕಡಿಮೆ ಅಂದರೆ ಸುಮಾರು 2.50 ಲಕ್ಷದವರೆಗೆ ವೇತನ ದೊರೆಯುತ್ತದೆ.
ಶಾಸಕರು : ತಿಂಗಳಿಗೆ ₹1,05,000 ದಿಂದ ₹1.15 ಲಕ್ಷದವರೆಗೆ ವೇತನ ಮತ್ತು ಭತ್ಯೆಗಳಿರುತ್ತವೆ. ಇದರಲ್ಲಿ ಮೂಲ ವೇತನದ ಜೊತೆಗೆ ಕ್ಷೇತ್ರ ಭತ್ಯೆ, ದೂರವಾಣಿ ಮತ್ತು ವೈದ್ಯಕೀಯ ವೆಚ್ಚಗಳು ಸೇರಿವೆ.
