ನವದೆಹಲಿ: ದೇಶದಲ್ಲಿ ಸ್ಲೀಪರ್ ಬಸ್ಗಳಲ್ಲಿ ಹೆಚ್ಚುತ್ತಿರುವ ಅಗ್ನಿ ಅವಘಡಗಳನ್ನು ತಡೆಯಲು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೊಸದೊಂದು ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತಂದಿದ್ದಾರೆ.
ಇನ್ನು ಮುಂದೆ ಯಾವುದೇ ಹೊಸ ಸ್ಲೀಪರ್ ಕೋಚ್ ಬಸ್ಗಳು ಅಗ್ನಿ ಸುರಕ್ಷತಾ ವ್ಯವಸ್ಥೆ ಹಾಗೂ ತುರ್ತು ನಿರ್ಗಮನ ದ್ವಾರಗಳ ಭೌತಿಕ ಮತ್ತು ವಿಡಿಯೋ ತಪಾಸಣೆಗೆ ಒಳಗಾಗದೆ ನೋಂದಣಿ ಪಡೆಯಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ‘ಬಸ್ವರ್ಲ್ಡ್ ಇಂಡಿಯಾ ಕಾನ್ಕ್ಲೇವ್ 2026’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಯಾಣಿಕರ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪರಿಷ್ಕೃತ ಬಸ್ ಬಾಡಿ ಕೋಡ್ (AIS-052) ಅಡಿಯಲ್ಲಿ, ಪ್ರತಿಯೊಂದು ಬಸ್ನ ಸುರಕ್ಷತಾ ವೈಶಿಷ್ಟ್ಯಗಳನ್ನು ಪರಿಶೀಲಿಸಿ ಅದರ ವಿಡಿಯೋವನ್ನು ‘ವಾಹನ’ (Vahan) ಪೋರ್ಟಲ್ನಲ್ಲಿ ಅಪ್ಲೋಡ್ ಮಾಡುವುದು ಕಡ್ಡಾಯವಾಗಿದೆ. ಈ ಮೂಲಕ ಅನಧಿಕೃತ ಬಸ್ ಬಾಡಿ ಬಿಲ್ಡರ್ಗಳಿಗೆ ಕಡಿವಾಣ ಹಾಕಿ, ಕೇವಲ ಮಾನ್ಯತೆ ಪಡೆದ ಕಂಪನಿಗಳು ಮಾತ್ರ ಗುಣಮಟ್ಟದ ಸ್ಲೀಪರ್ ಬಸ್ಗಳನ್ನು ತಯಾರಿಸುವಂತೆ ಸರ್ಕಾರ ಕ್ರಮ ಕೈಗೊಂಡಿದೆ.
ಈ ಎಲ್ಲ ಮಾನದಂಡಗಳು ಪೂರ್ಣಗೊಂಡ ನಂತರವಷ್ಟೇ ಬಸ್ಗಳಿಗೆ ನೋಂದಣಿ ಸಂಖ್ಯೆ ಸಿಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.
