ಶಿವಮೊಗ್ಗ : ನಗರದ ವಿದ್ಯಾನಗರದ ಜ್ಯೋತಿ ರಾವ್ ಬೀದಿಯಲ್ಲಿ ಪ್ರಕೃತಿಯ ಆರ್ಭಟ ಜನರಲ್ಲಿ ಕೆಲಕಾಲ ಭೀತಿ ಮೂಡಿಸಿತು. ಮಳೆ, ಗುಡುಗು-ಮಿಂಚಿನ ನಡುವೆ ಏಕಾಏಕಿ ಬಡಿದ ಸಿಡಿಲು ಒಂದು ತೆಂಗಿನ ಮರಕ್ಕೆ ತಗುಲಿ, ಕ್ಷಣಾರ್ಧದಲ್ಲೇ ಅದು ಬೆಂಕಿಗಾಹುತಿಯಾದ ಘಟನೆ ಭಾನುವಾರ ಸಂಜೆ ನಡೆದಿದೆ.
ಸಿಡಿಲಿನ ಭಾರೀ ಶಬ್ದಕ್ಕೆ ಬೆಚ್ಚಿಬಿದ್ದ ಸ್ಥಳೀಯರು ಹೊರಗೆ ಬಂದು ನೋಡಿದಾಗ ತೆಂಗಿನ ಮರ ಹೊತ್ತಿ ಉರಿಯುತ್ತಿರುವ ದೃಶ್ಯ ಕಂಡು ಆತಂಕಗೊಂಡರು. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸದಿದ್ದರೂ, ತೆಂಗಿನ ಮರ ಸಂಪೂರ್ಣ ಸುಟ್ಟುಹೋಗಿದೆ. ಗುಡುಗು-ಮಿಂಚಿನ ಸಮಯದಲ್ಲಿ ಸುರಕ್ಷಿತ ಸ್ಥಳದಲ್ಲಿ ಇರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
