ಮೈಸೂರು: ‘ರಾಜ್ಯದಲ್ಲಿ 2025–26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.94ನ್ನು ತಲುಪುವ ಮೂಲಕ ದಾಖಲೆ ನಿರ್ಮಿಸಿದೆ ಎಂದು ಹೆಮ್ಮೆ ಪಟ್ಟುಕೊಂಡಿದ್ದಾರೆ. ವಾಸ್ತವವಾಗಿ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲ, ಆದರೂ ದಾಖಲೆಯ ಫಲಿತಾಂಶ ಹೇಗೆ ಸಾಧ್ಯವಾಯಿತು? ರಾಜ್ಯದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಮಾಜಿ ಶಿಕ್ಷಣ ಸಚಿವ, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸಂಶಯ ವ್ಯಕ್ತಪಡಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಬಾರಿ ಶೇ 94.1ರಷ್ಟು ಫಲಿತಾಂಶ ಬಂದಿದೆ. ಹೋದ ವರ್ಷ ಶೇ 80.4ರಷ್ಟಿತ್ತು. ಒಮ್ಮೆಲೇ ಭಾರೀ ಜಿಗಿತ ಕಂಡಿದೆ. ಹೀಗಾಗಿ, ಪರೀಕ್ಷಾ ವಿಧಾನ, ಮೌಲ್ಯಮಾಪನದ ಬಗ್ಗೆ ಅನುಮಾನಗಳಿವೆ. ಕೆಲವೇ ಸೋಮಾರಿ ಶಿಕ್ಷಕರು ಮಾತ್ರ ಇಂತಹ ಫಲಿತಾಂಶವನ್ನು ಸ್ವಾಗತಿಸುತ್ತಾರಷ್ಟೆ. ಪರೀಕ್ಷೆಯಲ್ಲಿ ನಕಲು ಮಾಡಿಸಲಾಗಿದೆ ಹಾಗೂ ಕೇಂದ್ರಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ತೆಗೆಸಿ ಅವ್ಯವಹಾರ ನಡೆಸಲಾಗಿದೆ’ ಎಂದು ಆರೋಪಿಸಿದರು.
ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿಲ್ಲ. ಎಲ್ಲರೂ ಪಾಸಾಗಬೇಕೆಂದು ಕಸರತ್ತು ನಡೆಸಲಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಅವರ ಕಥೆ ಏನು? ಪಿಯುಸಿ ಹಂತದಲ್ಲಿ ಶಿಕ್ಷಣ ಮುಂದುವರಿಸುವವರ ಪ್ರಮಾಣ ಕಡಿಮೆ ಆಗಲಿದೆ. ಇದು ಆಘಾತಕಾರಿಯಾದುದು ಎಂದು ಕಳವಳ ವ್ಯಕ್ತಪಡಿಸಿದರು.
‘20ಕ್ಕೆ 20 ಆಂತರಿಕ ಅಂಕಗಳನ್ನು ಎಲ್ಲರಿಗೂ ಕೊಡಲಾಗಿದೆ. ಪಾಸಾಗಲು ಇನ್ನುಳಿದ 80 ಅಂಕಗಳಲ್ಲಿ 13 ಪಡೆದರೆ ಉತ್ತೀರ್ಣ. ಅದನ್ನೂ ಕಾಪಿ (ನಕಲು) ಮಾಡಿಸಿದ್ದಾರೆ. ಇದು ಬಹಳ ನೋವಿನ ಸಂಗತಿ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದೆ. ದೊಡ್ಡ ಸಾಧನೆ ಮಾಡಿದ್ದಾಗಿ ಕೊಚ್ಚಿಕೊಳ್ಳುತ್ತಿದೆ’ ಎಂದು ಟೀಕಿಸಿದರು.
ಮೂಲಭೂತ ವ್ಯವಸ್ಥೆಗಳೇ ಇಲ್ಲ:
ಶಿಕ್ಷಣ ಇಲಾಖೆಯ ಅಭಿವೃದ್ಧಿಗೆ ಏಷ್ಯನ್ ಡೆವಲಪ್ ಬ್ಯಾಂಕಿ (ಎಡಿಬಿ)ನಲ್ಲಿ 2 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಆ ಹಣದಲ್ಲೂ ಕಿಕ್ ಬ್ಯಾಕ್ ತೆಗೆದುಕೊಳ್ಳುತ್ತಾರೆ. ಮೌಲ್ಯ ಮಾಪನ ಕೇಂದ್ರಕ್ಕೆ ಶಿಕ್ಷಣ ಸಚಿವರು ಹೋಗಿದ್ದಾರೆ ಅಂದರೆ ಏನರ್ಥ. ಇಂಟರ್ನಲ್ 20ಕ್ಕೆ 20 ಕೊಡಿ ಎಂದು ಇವರೇ ಹೇಳಿದ್ದಾರೆ. ಈ ಮೂಲಕ ಮಗುವಿನ ಓದುವ ಉತ್ಸಾಹವನ್ನೇ ಕಸಿದಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಮೂಲಭೂತ ವ್ಯವಸ್ಥೆಗಳೇ ಇಲ್ಲ. ಸಿಬ್ಬಂದಿ, ಶಿಕ್ಷಕರ ಕೊರತೆ ನಡುವೆಯೂ ಇಷ್ಟೊಂದು ದೊಡ್ಡ ಮಟ್ಟದ ಫಲಿತಾಂಶ ಬರಲು ಹೇಗೆ ಸಾಧ್ಯವಾಯಿತು?. ಸಿದ್ದರಾಮನಹುಂಡಿಯಲ್ಲೇ ಇರುವ ಸಿದ್ದರಾಮಯ್ಯ ಇನ್ನಾದರೂ ಹೊರಬರಲಿ. ವಸ್ತುಸ್ಥಿತಿ ತಿಳಿದುಕೊಂಡು ವ್ಯವಸ್ಥೆಯನ್ನು ಬದಲಾಯಿಸಲಿ ಎಂದು ಹೇಳಿದರು.
ಇಂತಹ ಅಯೋಗ್ಯ ಶಿಕ್ಷಣ ಸಚಿವನ ಇಟ್ಟುಕೊಂಡು ರಾಜ್ಯದ ಗತಿ ಏನಾಗಬೇಕು? ಹಿಂದಿಗೆ ಗ್ರೇಡ್ ಕೊಡುವ ವಿಚಾರದಲ್ಲಿ ಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಹಿಂದಿ ಭಾಷೆಗೂ ಗ್ರೇಡ್ ಬದಲು ಅಂಕಗಳನ್ನೇ ಕೊಡುವಂತೆ ನ್ಯಾಯಾಲಯ ಹೇಳಿದೆ. ಕೋರ್ಟ್ ಛೀಮಾರಿ ಹಾಕಿದ ಎರಡೇ ದಿನಕ್ಕೆ ಫಲಿತಾಂಶ ಪ್ರಕಟ ಆಯ್ತು? ಹಾಗಾದರೆ ಮಾರ್ಕ್ಸ್ ಎರಡೇ ದಿನಗಳಲ್ಲಿ ಹೇಗೆ ಕೊಟ್ಟಿರಿ? ಎಂದು ಕೇಳಿದರು.
ತಂದೆಯ ಹೆಸರು ತೆಗೆಯಲಿ:
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಯುಸಿ ಫೇಲ್. ಆತನನ್ನು ಶಿಕ್ಷಣ ಸಚಿವನನ್ನಾಗಿ ಮಾಡಿದ್ದಾರೆ. ಈ ಮಾತನ್ನು ಆತನ ಅಣ್ಣ ಕುಮಾರ ಬಂಗಾರಪ್ಪನವರೇ ಹೇಳಿದ್ದರು. ಇನ್ನು ಸಿಎಂ ಸಿದ್ದರಾಮಯ್ಯಗೆ ಬುದ್ಧಿ ಇಲ್ಲ. ಶಿಕ್ಷಣ ಸಚಿವ ಬರೀ ಮಧು ಅಂತ ಹೆಸರಿಟ್ಟುಕೊಳ್ಳಲಿ, ಬಂಗಾರಪ್ಪ ಎಂದು ಹೇಳಿಕೊಂಡು ತಂದೆಯ ಹೆಸರಿಗೆ ಏಕೆ ಕೆಟ್ಟ ಹೆಸರು ತರಬೇಕು. ಅವರು ಸಿಎಂ ಆಗಿದ್ದಾಗ ನಾಡಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
