Trending

ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಸಾಮ್ರಾಟ್ ಚೌಧರಿ ನೇಮಕ : ನಾಳೆ ಪ್ರಮಾಣ ವಚನ ಸ್ವೀಕಾರ ಸಾಧ್ಯತೆ

Spread the love

ಪಟನಾ: 10 ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಿತೀಶ್‌ ಕುಮಾರ್‌ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಇದೀಗ ನೂತನ ಮುಖ್ಯಮಂತ್ರಿ ಘೋಷಣೆಯಾಗಿದೆ. ಬಿಜೆಪಿಯ ಸಾಮ್ರಾಟ್ ಚೌಧರಿ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಘೋಷಿಸಲಾಗಿದೆ. ಚೌಧರಿ ಅವರು ರಾಜ್ಯದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ಬಿಜೆಪಿ ನಾಯಕರಾಗಿದ್ದಾರೆ.

ಹಾಲಿ ಉಪ ಮುಖ್ಯಮಂತ್ರಿಯಾಗಿರುವ ಬಿಜೆಪಿಯ ಸಾಮ್ರಾಟ್‌ ಚೌಧರಿ ಹಿಂದುಳಿದ ವರ್ಗ (ಒಬಿಸಿ) ಸಮುದಾಯವಾದ ಕೊಯೇರಿ ಅಥವಾ ಕುಶ್ವಾಹ ಜಾತಿಗೆ ಸೇರಿದವರು. ಹಿಂದುಳಿದ ಜಾತಿಗಳಲ್ಲಿ, ಯಾದವರ ನಂತರ ಕುಶ್ವಾಹ ಸಮುದಾಯವು ಅತಿ ದೊಡ್ಡದಾಗಿದೆ.

ಸಾಮ್ರಾಟ್‌ ಚೌಧರಿ ಅವರು ನಿತೀಶ್‌ಕುಮಾರ್‌ ಅವರ ಮಾಜಿ ಆಪ್ತ ಶಕುನಿ ಚೌಧರಿ ಅವರ ಪುತ್ರ. 2017ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಒಬಿಸಿಗೆ ಸೇರಿದ ಚೌಧರಿ ಅವರು ಪ್ರಸ್ತುತ ತಾರಾಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ನೂತನ ಸಿಎಂ ಪ್ರಮಾಣವಚನ ಸ್ವೀಕಾರ ಕಾರ‍್ಯಕ್ರಮ ನಡೆಯಲಿದ್ದು, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.

ಆಗಸ್ಟ್ 2022 ರಲ್ಲಿ ನಿತೀಶ್ ಕುಮಾರ್ ಮಹಾಘಟಬಂಧನ್ ಜೊತೆ ಸರ್ಕಾರ ರಚಿಸಿದಾಗ, ಬಿಜೆಪಿಗೆ ಬಲಿಷ್ಠ ಮತ್ತು ಆಕ್ರಮಣಕಾರಿ ನಾಯಕನ ಅಗತ್ಯವಿತ್ತು. ಅಮಿತ್ ಶಾ ಅವರು ಸಾಮ್ರಾಟ್ ಚೌಧರಿ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಿದರು.

ಜನವರಿ 2024 ರಲ್ಲಿ, ಅವರು ಮೊದಲ ಬಾರಿಗೆ ಉಪಮುಖ್ಯಮಂತ್ರಿಯಾದರು ಮತ್ತು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾದರು. ಇದೀಗ ಬಿಹಾರದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

[pj-news-ticker]