Trending

ಹುಲಿಕಲ್ ಘಾಟ್‌ನಲ್ಲಿ ರಸ್ತೆ ಕುಸಿತ ಭೀತಿ – ವಾಹನ ಸಂಚಾರ ತಾತ್ಕಾಲಿಕ ನಿಷೇಧ

Spread the love

ಶಿವಮೊಗ್ಗ : ಜಿಲ್ಲೆಯಲ್ಲಿ ತೀರ್ಥಹಳ್ಳಿ ಮತ್ತು ಕುಂದಾಪುರವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ–52ರ ಬಾಳೆಬರೆ ಘಾಟ್ (ಹುಲಿಕಲ್ ಘಾಟ್) ಪ್ರದೇಶದಲ್ಲಿ ರಸ್ತೆ ಕುಸಿತದ ಭೀತಿ ಎದುರಾಗಿರುವ ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ಈ ಮಾರ್ಗದಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಈ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಅಭಿಷೇಕ್ ವಿ. (ಭಾ.ಆ.ಸೇ) ಅವರು ಆದೇಶ ಹೊರಡಿಸಿದ್ದಾರೆ.

ಹುಲಿಕಲ್ ಘಾಟ್ ವ್ಯಾಪ್ತಿಯ ಹೇರ್‌ಪಿನ್ ತಿರುವುಗಳಲ್ಲಿ ಈ ಹಿಂದೆ ಮಳೆಯಿಂದಾಗಿ ಭೂಕುಸಿತ ಉಂಟಾಗಿತ್ತು. ಪ್ರಸ್ತುತ ಅಲ್ಲಿ ರಕ್ಷಣಾತ್ಮಕ ಕಾಮಗಾರಿಗಳು ನಡೆಯುತ್ತಿವೆ. ಆದರೆ, ಏಪ್ರಿಲ್ 9ರಂದು ಕಾಮಗಾರಿ ನಡೆಯುತ್ತಿದ್ದ ಸ್ಥಳದ ಕೆಳಭಾಗದಲ್ಲಿ ಸುಮಾರು 12 ಮೀಟರ್ ಎತ್ತರದಿಂದ ಮತ್ತೆ ಭೂಕುಸಿತ ಸಂಭವಿಸಿದ್ದು, ಕಾಂಕ್ರೀಟ್ ರಸ್ತೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ.

ರಸ್ತೆಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ರಕ್ಷಣಾತ್ಮಕ ಕಾಮಗಾರಿಗಳು ಪೂರ್ಣಗೊಳ್ಳುವವರೆಗೆ ಸಂಚಾರವನ್ನು ನಿರ್ಬಂಧಿಸುವುದು ಅನಿವಾರ್ಯವಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ವಾಹನ ಚಾಲಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಹಾಗೂ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಕೋರಲಾಗಿದೆ.

ಪರ್ಯಾಯ ಮಾರ್ಗ

ಕ್ರ.ಸಂ

ಹಾಲಿ ಸಂಚಾರ ಮಾರ್ಗ

ಸೂಚಿಸಲಾದ ಪರ್ಯಾಯ ಮಾರ್ಗ

1

ತೀರ್ಥಹಳ್ಳಿಯಿಂದ ಕುಂದಾಪುರ ಕಡೆಗೆ: (ರಾಜ್ಯ ಹೆದ್ದಾರಿ-52 ಮಾಸ್ತಿಕಟ್ಟೆ-ಹುಲಿಕಲ್ ಘಾಟ್ ಮೂಲಕ)

ತೀರ್ಥಹಳ್ಳಿ – ರಾವೆ – ಕಾನುಗೋಡು – ನಗರ – ಕೊಲ್ಲೂರು – ಕುಂದಾಪುರ ರಸ್ತೆ.

2

ನಗರ/ಸಿದ್ಧಾಪುರ ಮಾರ್ಗವಾಗಿ ಕುಂದಾಪುರಕ್ಕೆ: (ರಾಜ್ಯ ಹೆದ್ದಾರಿ-278 ರ ಮೂಲಕ)

ತೀರ್ಥಹಳ್ಳಿ – ಯಡೂರು – ಮಾಸ್ತಿಕಟ್ಟೆ – ಕಾನುಗೋಡು – ನಗರ – ಕೊಲ್ಲೂರು – ಕುಂದಾಪುರ ರಸ್ತೆ.

3

ಶಿವಮೊಗ್ಗ/ಸಾಗರ ಕಡೆಯಿಂದ ಹೊಸನಗರ ಮೂಲಕ: (ಕುಂದಾಪುರ ಕಡೆಗೆ ಹೋಗುವ ಭಾರೀ ವಾಹನಗಳು)

ಶಿವಮೊಗ್ಗ – ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಮೂಲಕ ಹೊನ್ನಾವರ – ಭಟ್ಕಳ – ಬೈಂದೂರು – ಕುಂದಾಪುರ ರಸ್ತೆ.

[pj-news-ticker]