ಧಾರವಾಡ : ಕನ್ನಡ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾಗಿದ್ದ ಹಿರಿಯ ಸಾಹಿತಿ ಡಾ. ಗುರುಲಿಂಗ ಕಾಪಸೆ (96) ಅವರು ಬುಧವಾರ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಗುರುಲಿಂಗ ಕಾಪಸೆ ಅವರ ಮೂಲ ಊರು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲೋಣಿ ಬಿಕೆ ಗ್ರಾಮ. ಸದ್ಯ ಧಾರವಾಡದ ಸಪ್ತಾಪುರ ದುರ್ಗಾ ಕಾಲೋನಿಯಲ್ಲಿ ನೆಲೆಸಿದ್ದರು. 1928ರ ಎಪ್ರಿಲ್ 2ರಂದು ಜನಿಸಿದ ಗುರುಲಿಂಗ ಕಾಪಸೆ ಅವರು ತಮ್ಮ 96ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇಂದು ಮಧ್ಯಾಹ್ನ 2ರವರೆಗೆ ದುರ್ಗಾ ಕಾಲೋನಿಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮೃತರು ದೇಹ ದಾನ ಮಾಡಿದ್ದು, ಹೀಗಾಗಿ ಅವರ ಪಾರ್ಥಿವ ಶರೀರವನ್ನು ಬೈಲಹೊಂಗಲನ ಡಾ. ಮಹಾಂತೇಶ ರಾಮಣ್ಣವರ ಆಸ್ಪತ್ರೆಗೆ ನೀಡಲು ತಯಾರಿ ಮಾಡಲಾಗಿದೆ.
96 ವರ್ಷದ ತುಂಬು ಜೀವನ ನಡೆಸಿದ ಕಾಪಸೆ ಗುರುಗಳು ತಮ್ಮ ನಡೆ, ನುಡಿ, ಸರಳ ಆದರ್ಶಗಳಿಂದ ಸದಾಕಾಲ ಇತರರಿಗೆ ಮಾದರಿಯಾಗಿದ್ದರು. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.
ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾಗಿದ್ದ ಅವರು, ‘ಹಲಸಂಗಿ ಗೆಳೆಯರು’, ‘ಅಕ್ಕಮಹಾದೇವಿ’, ‘ಅರವಿಂದರು’, ‘ಬಸವೇಶ್ವರ’, ಶಾಲ್ಮಲೆಯಿಂದ ಗೋದಾವರಿಯವರೆಗೆ (ಪ್ರವಾಸ ಕಥನ) ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.
‘ವರದರಾಜ ಆದ್ಯ ಪ್ರಶಸ್ತಿ’, ‘ಆನಂದಕಂದ ಪ್ರಶಸ್ತಿ’, ‘ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ’ ಮೊದಲಾದ ಪುರಸ್ಕಾರಗಳು ಸಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಗುರುಲಿಂಗ ಕಾಪಸೆ ಗುರುಗಳು ಮಧುರಚೆನ್ನರು ಮತ್ತು ಅಂಬಿಕಾತನಯದತ್ತರನ್ನು ಎಂಟು ದಶಕಗಳಿಂದ ಹತ್ತಿರದಿಂದ ನೋಡಿ, ಅವರಿಬ್ಬನ್ನು ತಮ್ಮ ಆದರ್ಶವನ್ನಾಗಿ ಮಾಡಿಕೊಂಡಿದ್ದರು ಎಂದು ಹಿರಿಯ ಸಾಹಿತಿ ಶಂಕರ ಹಲಗತ್ತಿ. ಡಾ.ಸಿದ್ದನಗೌಡ ಪಾಟೀಲ್, ಹ.ವೆಂ. ಕಾಖಂಡಕಿ ಸೇರಿದಂತೆ ಅನೇಕರು ಕಾಪಸೆ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.