Trending

ಶಾಲಾ ಮಕ್ಕಳಿಗೆ ಮೊಬೈಲ್ ಬ್ಯಾನ್ ಚರ್ಚೆ : ಪೋಷಕರ ಅಭಿಪ್ರಾಯಕ್ಕೆ ಮಹತ್ವ – ಸಚಿವ ಮಧು ಬಂಗಾರಪ್ಪ

Spread the love

ಬೆಂಗಳೂರು : 16 ವರ್ಷದೊಳಗಿನ ಶಾಲಾ-ಕಾಲೇಜು ಮಕ್ಕಳಿಗೆ ಮೊಬೈಲ್ ಬಳಕೆಯನ್ನು ನಿಷೇಧಿಸಬೇಕೋ ಅಥವಾ ನಿರ್ಬಂಧಿಸಬೇಕೋ ಎಂಬುದರ ಕುರಿತು ಪೋಷಕರು ಹಾಗೂ ತಜ್ಞರೊಂದಿಗೆ ಚರ್ಚಿಸಿ ಮುಂದಿನ ಅಧಿವೇಶನದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ವಿಷಯ ಪ್ರಸ್ತಾಪಗೊಂಡಿದ್ದು, ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಮಕ್ಕಳಲ್ಲಿ ಮೊಬೈಲ್ ಚಟವು ಗಂಭೀರ ಸಮಸ್ಯೆಯಾಗಿ ಪರಿಣಮಿಸುತ್ತಿದ್ದು, ನಿಯಂತ್ರಣ ಅಗತ್ಯವಿದೆ ಎಂದು ಒತ್ತಾಯಿಸಿದರು. ಮೊಬೈಲ್ ಕೊಡದಿದ್ದರೆ ಕೆಲ ಮಕ್ಕಳು ಆತ್ಮಹತ್ಯೆಗೂ ಮುಂದಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.

ಸದಸ್ಯ ಜವರಾಯಿಗೌಡ ಸಹ ಸಾಮಾಜಿಕ ಜಾಲತಾಣಗಳ ಬಳಕೆಗೆ ನಿಯಂತ್ರಣ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಈ ಕುರಿತು ಉತ್ತರಿಸಿದ ಸಚಿವ ಮಧು ಬಂಗಾರಪ್ಪ, ದೇಶದಲ್ಲೇ ಮೊದಲ ಬಾರಿಗೆ 16 ವರ್ಷದೊಳಗಿನ ಮಕ್ಕಳ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣ ಬಳಕೆಗೆ ನಿಯಂತ್ರಣ ತರಲು ಕರ್ನಾಟಕ ಸರ್ಕಾರ ಮುಂದಾಗಿದೆ ಎಂದರು. ಮಾಹಿತಿ ತಂತ್ರಜ್ಞಾನ ಇಲಾಖೆಯ ಸಹಕಾರದೊಂದಿಗೆ ಸಮಿತಿ ರಚಿಸಲಾಗಿದ್ದು, ವಿವಿಧ ಆಯಾಮಗಳಲ್ಲಿ ಅಧ್ಯಯನ ನಡೆಯುತ್ತಿದೆ ಎಂದು ತಿಳಿಸಿದರು.

ಕೆಲ ದೇಶಗಳಲ್ಲಿ ಶಾಲೆಗಳಲ್ಲೇ ಮೊಬೈಲ್ ಬಳಕೆಗೆ ಸಂಪೂರ್ಣ ನಿಷೇಧ ಹೇರಲಾಗಿದ್ದು, ಅಂತಹ ಮಾದರಿಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಆದರೆ ಇಂದಿನ ಎಐ ಯುಗದಲ್ಲಿ ಮೊಬೈಲ್ ಬಳಕೆಯನ್ನು ಏಕಾಏಕಿ ಸಂಪೂರ್ಣ ನಿಷೇಧಿಸುವುದು ಕಷ್ಟಕರವಾಗಿದೆ. ಸಂವಹನಕ್ಕೆ ಮೊಬೈಲ್ ಉಪಯೋಗ ಇದ್ದರೂ, ಸಾಮಾಜಿಕ ಜಾಲತಾಣಗಳ ದುರ್ಬಳಕೆ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಮೊಬೈಲ್ ನಿಷೇಧ ಅಥವಾ ನಿರ್ಬಂಧ ಜಾರಿಗೆ ತಂದರೆ ಅದರ ಪರಿಣಾಮಗಳು, ವಿದ್ಯಾರ್ಥಿಗಳು ತರಗತಿಗೆ ಮೊಬೈಲ್ ತರಬೇಕೇ ಬೇಡವೇ ಎಂಬ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಸಿ, ಪೋಷಕರ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದಲ್ಲದೆ, ಪ್ರಸ್ತುತ ಶೈಕ್ಷಣಿಕ ಸಾಲಿನಿಂದ ನೈತಿಕ ಶಿಕ್ಷಣ (ಮಾರಲ್ ಸೈನ್ಸ್) ಕುರಿತ ಪುಸ್ತಕಗಳನ್ನು ಉಚಿತವಾಗಿ ವಿತರಿಸುವ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪರೀಕ್ಷಾ ಮೌಲ್ಯಮಾಪನ ಕೇಂದ್ರಗಳನ್ನು ತಾಲೂಕು ಮಟ್ಟದಲ್ಲಿ ಸ್ಥಾಪಿಸುವ ಬಗ್ಗೆ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಗುಣಮಟ್ಟ ಮತ್ತು ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಮೌಲ್ಯಮಾಪನವನ್ನು ಜಿಲ್ಲಾ ಮಟ್ಟದಲ್ಲೇ ಮುಂದುವರಿಸಲಾಗುವುದು ಎಂದರು.

[pj-news-ticker]