ಕಲಬುರಗಿ: ಮೋದಿ ಸರ್ಕಾರ ನಮ್ಮ ವಿದೇಶಾಂಗ ನೀತಿಯನ್ನು ಅಮೆರಿಕಕ್ಕೆ ಅಡ ಇಟ್ಟಿದೆ. ನಮ್ಮ ಗೌರವಕ್ಕೆ ಕವಡೆ ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನರೇಂದ್ರ ಮೋದಿ ಹಾಗೂ ದೇಶದ ಮರ್ಯಾದೆ ಹೋಗುತ್ತಿದ್ದರೂ ಒಬ್ಬರೂ ಮಾತನಾಡುತ್ತಿಲ್ಲ ಯಾಕೆ ಎಂದು ಬಿಜೆಪಿ ಸಂಸದರನ್ನು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಎಲ್‌ಪಿಜಿ ಸಿಲಿಂಡರ್ ಏರಿಕೆ ಹಾಗೂ ರಷ್ಯಾದಿಂದ ತೈಲ ಖರೀದಿಗೆ ಅಮೆರಿಕ ಅನುಮತಿ ವಿಚಾರದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಅವರು, ನೆನ್ನೆ ಯುಎಸ್ ಡೆಪ್ಯೂಟಿ ಸೆಕ್ರಟರಿ ಕ್ರಿಸ್ಟೋಫರ್ ದೆಹಲಿಯಲ್ಲಿ ಹೇಳ್ತಾರೆ, ನಾವು ಚೀನಾ ಜತೆ ಮಾಡಿದ ತಪ್ಪು ಭಾರತದೊಂದಿಗೆ ಮಾಡಲ್ಲ, ಭಾರತವನ್ನು ಬೆಳೆಯಲು ಬಿಡಲ್ಲ ಎಂದು ನಮ್ಮ ದೇಶದಲ್ಲೇ ಹೇಳುತ್ತಾರೆ ಎಂದರೆ ಪರಿಸ್ಥಿತಿ ಹೇಗಿದೆ ನೋಡಿ. ಮತ್ತೊಬ್ಬರು ಯುಎಸ್ ಸೆಕ್ರಟರಿ ಆಫ್ ಟ್ರೆಶರಿ ಸ್ಕಾಟ್ ಅವರು ನಾವು ಯುದ್ಧದ ಪರಿಣಾಮ 30 ದಿನ ರಷ್ಯಾ ಕಚ್ಚಾ ತೈಲ ಖರೀದಿಗೆ ಅನುಮತಿ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಇದಕ್ಕೆ ಒಬ್ಬ ಸಚಿವರಾದ ಎದೆಗಾರಿಕೆ ತೋರಿಸಿ ಪ್ರತಿಕ್ರಿಯಿಸಿಲ್ಲ ಎಂದು ಕಿಡಿಕಾರಿದರು.
ಮೊನ್ನೆ ಮದುವೆಯಾದ ರಶ್ಮಿಕಾ-ವಿಜಯ್ ಅವರನ್ನು ಭೇಟಿಯಾಗಲು ಪ್ರಧಾನಿ ಮೋದಿ ಅವರಿಗೆ ಸಮಯವಿದೆ. ಆದರೆ, ಆದರೆ, ನಮ್ಮ ದೇಶದ ಮರ್ಯಾದೆ ಹರಾಜಾಗುತ್ತಿರುವಾಗ ಈ ಬಗ್ಗೆ ಮಾತನಾಡಲು ಪುರಸೊತ್ತಿಲ್ಲ. ಮೊನ್ನೆ ಇಂಡಿಯಾ ತಂಡದ ಟಿ20 ಸೆಮಿಫೈನಲ್ ಪಂದ್ಯಕ್ಕೆ ವಿಶ್ ಮಾಡಿದ್ದರು. ನಾಳೆ ಫೈನಲ್ ಪಂದ್ಯಕ್ಕೂ ಆಲ್ ದ ಬೆಸ್ಟ್ ಎಂತಾರೆ ಎಂದರು.
ಈ ವೇಳೆ ಪ್ರಧಾನಿ ಮೋದಿ ಅಹಮದಾಬಾದ್‌ನಲ್ಲಿ ನಡೆಯುವ ಫೈನಲ್ ಪಂದ್ಯ ವೀಕ್ಷಣೆಗೆ ಹೋಗುವುದಿಲ್ಲವಂತೆ ಎಂದು ವರದಿಗಾರರು ಹೇಳಿದ್ದಕ್ಕೆ ಉತ್ತರಿಸಿದ ಸಚಿವ, ಒಳ್ಳೇದಾಯ್ತು, ಮೋದಿ ಹೋಗದಿದ್ದರೆ ಮ್ಯಾಚ್ ಗೆಲ್ಲಬಹುದು. ಅವರು ಕಾಲಿಟ್ಟಾಗೆಲ್ಲಾ ನಾವು ಸೋತಿದ್ದೇವೆ. ಇದನ್ನು ನಾನು ಹೇಳುತ್ತಿಲ್ಲ, ಅಂಕಿ ಅಂಶ ನೋಡಿ, ವಿತೌಟ್ ಡೇಟಾ ನಾನು ಮಾತನಾಡಲ್ಲ ಎಂದು ಹೇಳಿದರು.
