ಬೆಂಗಳೂರು : ರಾಜ್ಯದ ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಬೆಳೆಸಿ, ಮೊಬೈಲ್ ಬಳಕೆ ನಿಯಂತ್ರಿಸುವ ಉದ್ದೇಶದಿಂದ “ಮೊಬೈಲ್ ಬಿಡಿ ಪುಸ್ತಕ ಹಿಡಿ” ಅಭಿಯಾನವನ್ನು ಅನುಷ್ಠಾನಗೊಳಿಸಿ ಕರ್ನಾಟಕ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿಯನ್ನು ವ್ಯವಸ್ಥಿತವಾಗಿ ಬೆಳೆಸಿ, ಕ್ರಿಯಾಶೀಲ, ವಿವೇಚನೆಯುಕ್ತ ಹಾಗೂ ಉನ್ನತ ಚಿಂತನಾ ಸಾಮರ್ಥ್ಯವನ್ನು ಹೊಂದಿರುವ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವುದು ಶಿಕ್ಷಣ ಇಲಾಖೆಯ ಪ್ರಮುಖ ಉದ್ದೇಶ. ಓದುವಿಕೆಯು ವಿದ್ಯಾರ್ಥಿಗಳ ಬೌದ್ಧಿಕ ವಿಕಾಸ, ಮೌಲ್ಯಾಧಾರಿತ ಚಿಂತನೆ, ಆಲೋಚನಾ ಸಾಮರ್ಥ್ಯ ಹಾಗೂ ಜೀವನ ಕೌಶಲ್ಯಗಳ ಸಮಗ್ರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಮೊಬೈಲ್ ಫೋನ್ಗಳು ಹಾಗೂ ಇತರೆ ಡಿಜಿಟಲ್ ಸಾಧನಗಳ ಅತಿಯಾದ ಹಾಗೂ ಅನಿಯಂತ್ರಿತ ಬಳಕೆಯಿಂದಾಗಿ ಓದುವಿಕೆಯಲ್ಲಿ ಗಣನೀಯ ಕುಸಿತ ಉಂಟಾಗುತ್ತಿರುವುದು, ಕಲಿಕಾ ಆಸಕ್ತಿ ಗಂಭೀರವಾಗಿ ಕುಂಠಿತವಾಗುತ್ತಿರುವುದು, ಏಕಾಗ್ರತೆಯಲ್ಲಿ ಹಿನ್ನಡೆಯಾಗಿರುವುದು, ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತಿರುವುದು ಹಾಗೂ ಶೈಕ್ಷಣಿಕ ಸಾಧನೆಗೆ ಸ್ಪಷ್ಟ ಅಡ್ಡಿಯುಂಟಾಗುತ್ತಿರುವುದನ್ನು ಗಮನಿಸಲಾಗಿದೆ.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಮೊಬೈಲ್ ಬಳಕೆಯನ್ನು ನಿಯಂತ್ರಿಸಿ, ಓದುವ ಅಭ್ಯಾಸವನ್ನು ಪುನಶ್ಚತನಗೊಳಿಸುವ ಮೂಲಕ ಜ್ಞಾನವೃದ್ಧಿಗೆ ಪೂರಕವಾದ ಕಲಿಕಾ ವಾತಾವರಣವನ್ನು ನಿರ್ಮಿಸಿ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸವನ್ನು ಸಾಧಿಸುವ ಉದ್ದೇಶದಿಂದ “ಮೊಬೈಲ್ ಬಿಡಿ – ಪುಸ್ತಕ ಹಿಡಿ” ಅಭಿಯಾನವನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.
ಶಾಲಾ ಹಂತದಲ್ಲಿ ಕೈಗೊಳ್ಳಬೇಕಾದ ಕ್ರಮಗಳು:
2026-27ನೇ ಸಾಲಿಗೆ ಮಕ್ಕಳ ದಾಖಲಾತಿ ಜಾಗೃತಿ ಅಭಿಯಾನದ ಕುರಿತ ಉಲ್ಲೇಖ(1) ರ ಸರ್ಕಾರದ ಸುತ್ತೋಲೆಯಲ್ಲಿ ಶಾಲಾ ಹಂತದಲ್ಲಿ ಎಸ್ಡಿಎಂಸಿ ಮತ್ತು ಪೋಷಕರ ಸಭೆಗಳನ್ನು ನಿಯಮಿತವಾಗಿ ನಡೆಸಲು ತಿಳಿಸಲಾಗಿರುತ್ತದೆ. ಸದರಿ ಸಭೆಗಳಲ್ಲಿ ಮೊಬೈಲ್ ಬಳಕೆಯ ಪರಿಣಾಮಗಳ ಬಗ್ಗೆ ಹೆಚ್ಚು ಜ್ಞಾನವನ್ನು ಹೊಂದಿರುವ ತಜ್ಞರ ಮೂಲಕ ಜಾಗೃತಿಯನ್ನು ನೀಡಲು ಕ್ರಮವಹಿಸುವುದು. ಹಾಗೂ ಮನೆಗಳಲ್ಲಿ ವಿದ್ಯಾರ್ಥಿಗಳ ಮೊಬೈಲ್ ಬಳಕೆಯನ್ನು ನಿಯಂತ್ರಿಸಲು ಕೆಳಕಂಡ ಅಂಶಗಳ ಬಗ್ಗೆ ಗಮನ ಹರಿಸಲು ತಿಳಿಸುವುದು.
ಮಕ್ಕಳು ಯಾವ ಉದ್ದೇಶಕ್ಕಾಗಿ ಮೊಬೈಲ್ ಅನ್ನು ಬಳಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸಿ ಅರಿತುಕೊಳ್ಳುವುದು. ಮೊಬೈಲ್ ಬಳಕೆಯ ಸಮಯವನ್ನು ಮಿತಿಗೊಳಿಸುವುದು. ಊಟದ ಸಮಯದಲ್ಲಿ, ಮಲಗುವ ಮುನ್ನ ಹಾಗೂ ದೈನಂದಿನ ಇತರೆ ಚಟುವಟಿಕೆಗಳನ್ನು ಮಾಡುವಾಗ ಮೊಬೈಲ್ ಬಳಕೆ ಮಾಡದೆ ಇರುವಂತೆ ಗಮನಹರಿಸುವುದು.
ಓದುವಿಕೆ ಅಥವಾ ಇತರೆ ಆಫ್ಲೈನ್ ಚಟುವಟಿಕೆಗಳಾದ ಆಟಗಳು, ಮನೆಯ ಸದಸ್ಯರೊಂದಿಗೆ ಸಂವಹನ ಮಾಡುವುದು, ಮಕ್ಕಳ ಅಭಿರುಚಿಗೆ ಅನುಗುಣವಾದ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದನ್ನು ಪ್ರೋತ್ಸಾಹಿಸುವುದು.
