ಭದ್ರಾವತಿ: ನಗರದ ನೆಹರು ನಗರದ ನಿವಾಸಿಯಾಗಿರುವ, ಕೊಲೆ, ಗಾಂಜಾ ಮಾರಾಟ ಹಾಗೂ ಕಳ್ಳತನ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ ಡಿಚ್ಚಿ ಮುಬಾರಕ್ನನ್ನು ಬಂಧಿಸಲು ತೆರಳಿದ ವೇಳೆ, ಆತ ಪೊಲೀಸರ ಮೇಲೆ ದಾಳಿ ನಡೆಸಲು ಯತ್ನಿಸಿದ ಹಿನ್ನೆಲೆಯಲ್ಲಿ ತಮ್ಮ ಜೀವ ರಕ್ಷಣೆಗಾಗಿ ಪೊಲೀಸರು ಮುಬಾರಕ್ನ ಕಾಲಿಗೆ ಗುಂಡು ಹಾರಿಸಿದ್ದಾರೆ.
ಇಂದು ಭದ್ರಾವತಿಯ ಗೌರಪುರದ ಚಾನೆಲ್ ಬಳಿ ಡಕಾಯಿತಿಗೆ ಹೊಂಚು ಹಾಕಿ ಕುಳಿತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ, ಇಬ್ಬರು ಸಬ್ ಇನ್ಸ್ಪೆಕ್ಟರ್ಗಳ ನೇತೃತ್ವದ ಪೊಲೀಸ್ ತಂಡ ಆರೋಪಿಯನ್ನು ಬಂಧಿಸಲು ತೆರಳಿದೆ. ಈ ವೇಳೆ ಆರೋಪಿ ಪೊಲೀಸರ ಕೈ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದು, ಪಿಎಸ್ಐ ಕೃಷ್ಣಕುಮಾರ್ ಹಾಗೂ ಆದರ್ಶ್, ಸಿದ್ದಪ್ಪ ಅವರ ಮೇಲೆ ಡ್ರ್ಯಾಗರ್ನಿಂದ ಹಲ್ಲೆ ನಡೆಸಿದ್ದಾನೆ.
ಪರಿಸ್ಥಿತಿ ನಿಯಂತ್ರಣ ತಪ್ಪುವ ಸಾಧ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ, ಪೊಲೀಸರು ತಮ್ಮ ಆತ್ಮರಕ್ಷಣೆಗೆ ಮುಬಾರಕ್ನ ಕಾಲಿಗೆ ಗುಂಡು ಹಾರಿಸಿದ್ದಾರೆ. ಹಲ್ಲೆಯಲ್ಲಿ ಗಾಯಗೊಂಡ ಪಿಎಸ್ಐ ಕೃಷ್ಣಕುಮಾರ್, ಆದರ್ಶ್, ಸಿದ್ದಪ್ಪ ಹಾಗೂ ಆರೋಪಿ ಡಿಚ್ಚಿ ಮುಬಾರಕ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್ ಭೇಟಿ ನೀಡಿ, ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಈ ಸಂಬಂಧ ಮುಂದಿನ ತನಿಖೆ ನಡೆಯುತ್ತಿದೆ.
