ತುಮಕೂರು: ಮಾಜಿ ಸಂಸದೆ ಹಾಗೂ ಹಿರಿಯ ನಟಿ ಬಿ. ಜಯಶ್ರೀ ಅವರನ್ನು ಭೂಮಾಪನ ಇಲಾಖೆ ಅಧಿಕಾರಿಗಳು ಅನಗತ್ಯವಾಗಿ ಅಲೆದಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ಭೂಮಾಪನ ಕಚೇರಿಗೆ ಬಿ. ಜಯಶ್ರೀ ಹಲವು ಬಾರಿ ಭೇಟಿ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗುಬ್ಬಿಯ ಜೀ.ವಿ. ಮಾಲತಮ ಆರ್ಟ್ ಟ್ರಸ್ಟ್ಗೆ ರಂಗ ಚಟುವಟಿಕೆಗಳಿಗಾಗಿ ಐದು ಗುಂಟೆ ಜಮೀನು ದಾನ ಮಾಡಿದ್ದ ಬಿ. ಜಯಶ್ರೀ, ಜಾಗದ ಸರ್ವೆಗಾಗಿ ಅರ್ಜಿ ಸಲ್ಲಿಸಿದ್ದರು. ಸರ್ವೆ ಶುಲ್ಕವಾಗಿ ಸುಮಾರು 3,500 ರೂ. ಪಾವತಿಸಿದರೂ ಇದುವರೆಗೂ ಸರ್ವೆ ಕಾರ್ಯ ನಡೆದಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಸರ್ವೆ ವಿಳಂಬಕ್ಕೆ ಕಾರಣ ಕೇಳಿದಾಗ ಯಾವುದೇ ಅಧಿಕಾರಿಗಳಿಂದ ಸ್ಪಷ್ಟ ಉತ್ತರ ಸಿಗಲಿಲ್ಲ. ಈ ಬಗ್ಗೆ ಭೂಮಾಪನ ಅಧಿಕಾರಿಗಳ ವಿರುದ್ಧ ಬಿ. ಜಯಶ್ರೀ ಗಂಭೀರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಾನ ಮಾಡಿದ ಜಾಗಕ್ಕೂ ನ್ಯಾಯ ಸಿಗದ ಸ್ಥಿತಿ ನಿರ್ಮಾಣವಾಗಿರುವುದು ಬೇಸರ ತಂದಿದೆ ಎಂದು ಅವರು ತಿಳಿಸಿದ್ದಾರೆ.
