Trending

ಮೂರನೇ ದಿನದ ತರಳಬಾಳು ಹುಣ್ಣಿಮೆ ಮಹೋತ್ಸವ : ಸುತ್ತೂರು ಶ್ರೀಗಳಿಂದ ಆಶೀರ್ವಚನ, ಸಮಾಜಮುಖಿ ಸಂದೇಶ

Spread the love

ಭದ್ರಾವತಿ: ತರಳಬಾಳು ಹುಣ್ಣಿಮೆ ಮಹೋತ್ಸವದ ಮೂರನೇ ದಿನದ ಸಂಜೆ ಕಾರ್ಯಕ್ರಮದಲ್ಲಿ ಸುತ್ತೂರು ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಜನಕಲ್ಯಾಣ, ಸಹೋದರತ್ವ ಹಾಗೂ ಮೌಲ್ಯಾಧಾರಿತ ಜೀವನದ ಅಗತ್ಯತೆಯನ್ನು ಒತ್ತಿ ಹೇಳಿದರು.

ನೂರಾರು ವರ್ಷಗಳ ಇತಿಹಾಸ ಹೊಂದಿರುವ ತರಳಬಾಳು ಮಠವು ತನ್ನ ಧ್ಯೇಯೋದ್ದೇಶಗಳ ಮೂಲಕ ಸಮಾಜವನ್ನು ತಿದ್ದುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ ಎಂದರು. ಹಿರಿಯ ಗುರುಗಳ ಆಶಯಗಳೇ ಇಂದಿನ ಜಗದ್ಗುರುಗಳನ್ನು ಸಮಾಜಮುಖಿ ಕಾರ್ಯಗಳತ್ತ ಕೊಂಡೊಯ್ದಿದ್ದು, ರೈತರಿಗೆ ಮೂಲಸೌಕರ್ಯ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.

ಮಾಜಿ ವಿಧಾನಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಮಾತನಾಡಿ, ಇಂದು ಭಾರತ ಗಣರಾಜ್ಯವಾಗಿ ರೂಪುಗೊಂಡ ದಿನವಾಗಿದೆ. ಕಳೆದ ಏಳು ದಶಕಗಳ ಸಾಧನೆಗಳ ಕುರಿತು ಆತ್ಮಪರಿಶೀಲನೆ ಅಗತ್ಯವಿದೆ. ಅನೇಕ ಆಳ್ವಿಕೆಗಳ ನಡುವೆಯೂ ನಮ್ಮ ಸಂಸ್ಕೃತಿ ಉಳಿದಿರುವುದು ಭಾರತೀಯರ ಶ್ರದ್ಧೆ ಮತ್ತು ಕಾಳಜಿಯ ಫಲ ಎಂದು ಹೇಳಿದರು.

ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, ತರಳಬಾಳು ಹುಣ್ಣಿಮೆ ಮಹೋತ್ಸವ ನಾಡಹಬ್ಬವಾಗಿ ರೂಪುಗೊಂಡಿದೆ ಎಂದರು. ತುಂಗಭದ್ರ ನದಿಯಿಂದ 44 ಕೆರೆಗಳಿಗೆ ನೀರು ಹರಿಸುವ ಕಾರ್ಯದಿಂದ ರೈತರು ಆರ್ಥಿಕವಾಗಿ ಸಬಲರಾಗಿದ್ದಾರೆ. ಈ ಕಾರ್ಯದಿಂದ ಜಗದ್ಗುರುಗಳು ಆಧುನಿಕ ಭಗೀರಥರಾಗಿದ್ದಾರೆ ಎಂದು ಶ್ಲಾಘಿಸಿದರು.

ಬೇಲೂರು ಶಾಸಕ ಹೆಚ್.ಕೆ. ಸುರೇಶ್ ಮಾತನಾಡಿ, ಮಠಮಾನ್ಯಗಳ ಪಾತ್ರದಿಂದಲೇ ಶಿಕ್ಷಣ ಹಾಗೂ ಮೌಲ್ಯಗಳು ಬೆಳೆದು ಬಂದಿವೆ ಎಂದು ಹೇಳಿದರು. ಸಮಾಜವನ್ನು ತಿದ್ದುವ ಕಾರ್ಯ ಎಲ್ಲರಿಂದಲೂ ನಡೆಯಬೇಕೆಂದು ಅಭಿಪ್ರಾಯಪಟ್ಟರು.

ಉಡುಪಿ–ಚಿಕ್ಕಮಗಳೂರು ಲೋಕಸಭಾ ಸದಸ್ಯ ಹಾಗೂ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ, ವಿಧಾನಪರಿಷತ್ ಸದಸ್ಯ ರಮೇಶ್‌ಬಾಬು, ಹಗರಿಬೊಮ್ಮನಹಳ್ಳಿ ಶಾಸಕ ಕೆ. ನೇಮಿರಾಜ ನಾಯ್ಕ ಹಾಗೂ ಹೆಚ್.ಆರ್. ಬಸವರಾಜಪ್ಪ ಉಪಸ್ಥಿತರಿದ್ದರು.

[pj-news-ticker]