ಭದ್ರಾವತಿ: ವ್ಯಕ್ತಿಯ ಆರೋಗ್ಯವೇ ಸಮಾಜದ ಆರೋಗ್ಯಕ್ಕೆ ಆಧಾರವಾಗಿದ್ದು, ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಸಮತೋಲನ ಮತ್ತು ಸಾಮಾಜಿಕ ಹೊಣೆಗಾರಿಕೆಯೂ ಅಗತ್ಯ ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೇಳಿದರು.
ತರಳಬಾಳು ಹುಣ್ಣಿಮೆ ಮಹೋತ್ಸವದ ಎರಡನೇ ದಿನ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರೋಗ್ಯವನ್ನು ವೈಯಕ್ತಿಕ ವಿಷಯವಲ್ಲದೆ ಸಮಾಜದ ಒಟ್ಟಾರೆ ಹೊಣೆಗಾರಿಕೆಯಾಗಿ ನೋಡಬೇಕೆಂದು ಕರೆ ನೀಡಿದರು.
ಆಯುರ್ವೇದ ವೈದ್ಯ ಡಾ. ಗಿರಿಧರ್ ಕಜೆ ಮಾತನಾಡಿ, ಆಯುರ್ವೇದವು ಕೇವಲ ಚಿಕಿತ್ಸೆಗೆ ಸೀಮಿತವಲ್ಲದೆ ಜೀವನವನ್ನು ಸರಿಯಾದ ದಾರಿಯಲ್ಲಿ ನಡೆಸುವ ಮಾರ್ಗಸೂಚಿಯಾಗಿದೆ ಎಂದರು. ಪ್ರಕೃತಿಯೊಂದಿಗೆ ಹೊಂದಾಣಿಕೆಯ ಜೀವನಶೈಲಿಯೇ ಆರೋಗ್ಯವಂತ ಸಮಾಜದ ಮೂಲವೆಂದು ಅವರು ತಿಳಿಸಿದರು.
ಬೆಂಗಳೂರು ವೈದ್ಯ ಡಾ. ಸಿ.ಎನ್. ಪಾಟೀಲ್ ಧೂಮಪಾನದ ಅಪಾಯಗಳ ಕುರಿತು ಎಚ್ಚರಿಸಿ, ಧೂಮಪಾನ ವ್ಯಕ್ತಿಯ ಜೀವನವಷ್ಟೇ ಅಲ್ಲದೆ ಕುಟುಂಬದ ಭವಿಷ್ಯವನ್ನೂ ಕತ್ತಲೆಗೆ ತಳ್ಳುವ ಮೌನ ಹಂತಕ ಎಂದು ಹೇಳಿದರು. ಪ್ಯಾಸಿವ್ ಸ್ಮೋಕಿಂಗ್ನಿಂದ ನಿರಪರಾಧರೂ ಅಪಾಯಕ್ಕೆ ಒಳಗಾಗುತ್ತಿರುವುದು ಗಂಭೀರ ವಿಷಯವೆಂದರು.
ಹರಿಹರದ ಶ್ರೀ ವಚನಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ, ಆರೋಗ್ಯ, ಸಂಸ್ಕಾರ ಮತ್ತು ಸೇವೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ದಾವಣಗೆರೆ ಸಂಸದೆ ಡಾ. ಪ್ರಭ್ರಾಮಲ್ಲಿಕಾರ್ಜುನ್, ಇಂಗ್ಲೆಂಡ್ನ ವೈದ್ಯ ಡಾ. ಎಸ್. ಶಿವಪ್ರಸಾದ್, ಡಾ. ಎಚ್.ಜೆ. ವಿಜಯಕುಮಾರ್, ಕೋಗಳಿ ಕೋಟ್ರೇಶ್, ಹೆಚ್.ಆರ್. ಬಸವರಾಜಪ್ಪ, ಬಿ.ಕೆ. ಜಗನ್ನಾಥ ಉಪಸ್ಥಿತರಿದ್ದರು.
