Trending

ನೆಹರು ರಸ್ತೆ ರಾಜಕಾಲುವೆ ಒತ್ತುವರಿ ಪ್ರಕರಣ : ಪಾಲಿಕೆ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸುಮೋಟೋ ಕೇಸ್

Spread the love

ಶಿವಮೊಗ್ಗ: ನಗರದ ಹೃದಯ ಭಾಗವಾದ ನೆಹರು ರಸ್ತೆಯಲ್ಲಿ ಹಾದು ಹೋಗುವ ರಾಜಕಾಲುವೆಯನ್ನು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದು ಒತ್ತುವರಿ ಮಾಡಿಕೊಂಡಿರುವ ಆರೋಪಕ್ಕೆ ಸಂಬಂಧಿಸಿದಂತೆ, ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಲೋಕಾಯುಕ್ತವು ಸುಮೋಟೋ ಪ್ರಕರಣ ದಾಖಲಿಸಿದೆ.

ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ನೆಹರು ರಸ್ತೆಯ ವರ್ತಕರ ಸಂಘದ ಅಧ್ಯಕ್ಷ ಸಾಧನ ಟ್ರೇಡರ್ಸ್‌ನ ರಂಗನಾಥ್ ಅವರ ನೇತೃತ್ವದಲ್ಲಿ ವರ್ತಕರು ಹಾಗೂ ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯೆ ಅರ್ಚನ ನಿರಂಜನ್ ಅವರು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡರಿಗೆ ದೂರು ಸಲ್ಲಿಸಿ ಮನವಿ ಮಾಡಿದ್ದರು.

ಇದಕ್ಕೆ ಪೂರಕವಾಗಿ, ಶಿವಮೊಗ್ಗ ಸಂಚಾರಿ ಪೊಲೀಸ್ ಇಲಾಖೆ ಕೂಡ ರಾಜಕಾಲುವೆ ಹಾಗೂ ಕನ್ಸರ್ವೆನ್ಸಿ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿರುವುದರಿಂದ ನೆಹರು ರಸ್ತೆಯಲ್ಲಿ ತೀವ್ರ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ ಎಂದು ಉಲ್ಲೇಖಿಸಿ, ಒತ್ತುವರಿ ತೆರವುಗೊಳಿಸಿ ಸುಗಮ ಸಂಚಾರ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಮಹಾನಗರ ಪಾಲಿಕೆಗೆ ಪತ್ರ ಬರೆದಿತ್ತು.

ಆದರೆ, ಈ ಎಲ್ಲ ಮನವಿ ಹಾಗೂ ಪತ್ರಗಳಿದ್ದರೂ ಸಹ ಮಹಾನಗರ ಪಾಲಿಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ಇ–ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಸುದ್ದಿ ಪ್ರಸಾರಗೊಂಡಿದ್ದು, ಸಾರ್ವಜನಿಕ ಹಿತಾಸಕ್ತಿಯ ವಿಷಯವೆಂದು ಪರಿಗಣಿಸಿದ ಲೋಕಾಯುಕ್ತ ನ್ಯಾಯಮೂರ್ತಿಗಳು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.

ಮಾನ್ಯ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಫಣೀಂದ್ರ ಅವರು ಮಹಾನಗರ ಪಾಲಿಕೆಯ ಅಧಿಕಾರಿಗಳಾದ ಎಇಇ ಶ್ರೀಮತಿ ಜ್ಯೋತಿ ಹಾಗೂ ಜೆಇ ವಸಂತ್ ಕುಮಾರ್ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿ, ಸಮಸ್ಯೆಗೆ ಸಂಬಂಧಿಸಿದಂತೆ ಶೀಘ್ರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಜೊತೆಗೆ, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಹಾಗೂ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳೆಕಟ್ಟಿಯವರಿಗೆ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಈ ನಡುವೆ, ನೆಹರು ರಸ್ತೆಯ ವರ್ತಕರು ಹಾಗೂ ವಿವಿಧ ಸಂಘಟನೆಗಳು ಪಕ್ಷಾತೀತವಾಗಿ ಜನವರಿ 30ರೊಳಗೆ ರಾಜಕಾಲುವೆ ಒತ್ತುವರಿ ತೆರವುಗೊಳಿಸದಿದ್ದಲ್ಲಿ, ನೆಹರು ರಸ್ತೆಯ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

[pj-news-ticker]