ಶಿಕಾರಿಪುರ: ತಾಲೂಕಿನ ಹಾರೆಗೊಪ್ಪ ಗ್ರಾಮದಲ್ಲಿ ಗುರುವಾರ ಮುಂಜಾನೆ ಜಮೀನಿನಲ್ಲಿ ಕೆಲಸಕ್ಕೆ ತೆರಳಿದ್ದ ರೈತನ ಮೇಲೆ ಏಕಾಏಕಿ ಕರಡಿ ದಾಳಿ ನಡೆಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಗ್ರಾಮದ ನಿವಾಸಿ ಸೋಮ್ಲಾ ನಾಯಕ್ ಅವರು ತಮ್ಮ ಜಮೀನಿನಲ್ಲಿ ಮೋಟರ್ ಚಾಲನೆ ಮಾಡಲು ಮುಂಜಾನೆ ತೆರಳಿದ ವೇಳೆ, ಹಿಂದಿನಿಂದ ಬಂದ ಕರಡಿ ಅಪ್ರತೀಕ್ಷಿತವಾಗಿ ದಾಳಿ ನಡೆಸಿದೆ. ದಾಳಿಯಲ್ಲಿ ಅವರ ಕುತ್ತಿಗೆ, ಬೆನ್ನು ಹಾಗೂ ಹೊಟ್ಟೆ ಭಾಗಗಳಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಸೋಮ್ಲಾ ನಾಯಕ್ ಅವರ ಕಿರುಚಾಟಕ್ಕೆ ಕರಡಿ ಸ್ಥಳದಿಂದ ಪರಾರಿಯಾಗಿದ್ದು, ಪ್ರಾಣಾಪಾಯದಿಂದ ತಪ್ಪಿಸಿಕೊಂಡ ಅವರು ಗಾಯಗೊಂಡ ಸ್ಥಿತಿಯಲ್ಲೇ ಹಾರೆಗೊಪ್ಪ ಬಸ್ ನಿಲ್ದಾಣದವರೆಗೆ ಓಡಿ ಬಂದಿದ್ದಾರೆ. ಅಲ್ಲಿ ಸೇರಿದ್ದ ಸಾರ್ವಜನಿಕರು ತಕ್ಷಣವೇ ಅವರನ್ನು ಶಿಕಾರಿಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದು ಆಸ್ಪತ್ರೆಗೆ ಆಗಮಿಸಿದ ಅರಣ್ಯಾಧಿಕಾರಿ ಡಿ.ಆರ್.ಎಫ್.ಓ. ಹರೀಶ್ ಸಜ್ಜಪ್ಪ ಅವರು ಗಾಯಾಳುವಿನ ಆರೋಗ್ಯ ವಿಚಾರಿಸಿ ಮಾಹಿತಿ ಸಂಗ್ರಹಿಸಿದರು. ಈ ವೇಳೆ ಅರಣ್ಯ ಇಲಾಖೆಯಿಂದ ನೀಡಲಾಗುವ ಪರಿಹಾರವನ್ನು ಒದಗಿಸುವುದಾಗಿ ಭರವಸೆ ನೀಡಿದ ಅವರು, ಆ ಪ್ರದೇಶದಲ್ಲಿ ಮತ್ತೆ ಕರಡಿ ಕಾಣಿಸಿಕೊಂಡಲ್ಲಿ ಸೆರೆಹಿಡಿಯಲು ಬೋನ್ಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಘಟನೆ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದು, ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
