ಶಿವಮೊಗ್ಗ: ನಗರದಲ್ಲಿ ಬಸ್ ಪ್ರಯಾಣಿಕರ ಸುಗಮ ಸಂಚಾರ ಹಾಗೂ ವಂಚನೆರಹಿತ ಪ್ರಯಾಣ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣಗಳ ಬಳಿ ನೂತನ ಆಟೋ ರಿಕ್ಷಾ ಪ್ರೀ–ಪೈಯ್ಡ್ ಕೌಂಟರ್ಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಟೋ ರಿಕ್ಷಾ ಸಂಘಗಳ ಪ್ರತಿನಿಧಿಗಳು ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (ಆರ್ಟಿಓ) ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರದ ರೈಲ್ವೆ ನಿಲ್ದಾಣದ ಬಳಿ ಈಗಾಗಲೇ ಆಟೋ ರಿಕ್ಷಾ ಪ್ರೀ–ಪೈಯ್ಡ್ ಕೌಂಟರ್ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಯಾಣಿಕರಿಗೆ ಅನುಕೂಲವಾಗಿರುವುದು ಗಮನಾರ್ಹವಾಗಿದೆ. ಇದೇ ಮಾದರಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ಬಸ್ ನಿಲ್ದಾಣಗಳಲ್ಲಿಯೂ ಪ್ರೀ–ಪೈಯ್ಡ್ ಕೌಂಟರ್ ಆರಂಭಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಜನವರಿ 15ರ ನಂತರ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣಗಳ ಸಮೀಪ ಪ್ರೀ–ಪೈಯ್ಡ್ ಕೌಂಟರ್ಗಳನ್ನು ಆರಂಭಿಸುವಂತೆ ಚೈತನ್ಯ ರೂರಲ್ ಡೆವಲಪ್ಮೆಂಟ್ ಕಾರ್ಯದರ್ಶಿವರಿಗೆ ಅನುಮೋದನೆ ನೀಡಲಾಗಿದೆ. ಪೊಲೀಸ್ ಹಾಗೂ ಆರ್ಟಿಓ ಇಲಾಖೆಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ ಕೌಂಟರ್ಗಳಿಗೆ ಸೂಕ್ತ ಸ್ಥಳ ನಿಗದಿಪಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಹಾಗೂ ಪ್ರೀ–ಪೈಯ್ಡ್ ಕೌಂಟರ್ ವ್ಯವಸ್ಥೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಜಾಹೀರಾತು ಫಲಕಗಳು, ಧ್ವನಿವರ್ಧಕಗಳ ಮೂಲಕ ಘೋಷಣೆ ಹಾಗೂ ಮಾಹಿತಿ ಫಲಕಗಳನ್ನು ಅಳವಡಿಸುವಂತೆ ಪೊಲೀಸ್ ಮತ್ತು ಆರ್ಟಿಓ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದರು.
ಮುಂಜಾನೆ 4.45, ಬೆಳಿಗ್ಗೆ 11 ಗಂಟೆ, ಸಂಜೆ 7.30 ಹಾಗೂ ರಾತ್ರಿ 9.30 ರ ಸಮಯದಲ್ಲಿ ಪ್ರಯಾಣಿಕರು ಮನೆಗೆ ತೆರಳಲು ಆಟೋ ರಿಕ್ಷಾಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಹಾಗಾಗಿ ರೈಲ್ವೆ ನಿಲ್ದಾಣದ ಬಳಿ ಇರುವ ಆಟೋ ರಿಕ್ಷಾ ಪ್ರೀ ಪೈಯ್ಡ್ ಕೌಂಟರ್ಗೆ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿ ಹಾಗೂ ಕೌಂಟರ್ನಲ್ಲಿ ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಿ ಪ್ರಯಾಣಿಕರ ಸಂಚಾರವನ್ನು ಸುಗಮ ಮಾಡಬೇಕು ಎಂದು ಚೈತನ್ಯ ರೂರಲ್ ಡೆವಲಪ್ಮೆಂಟ್ ಕಾರ್ಯದರ್ಶಿಯವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಅಪರ ಪೊಲೀಸ್ ಅಧೀಕ್ಷಕರಾದ ಕಾರ್ಯಪ್ಪ, ಆರ್ಟಿಓ ಅಧೀಕ್ಷಕ ಶಶಿಧರ್, ಸಂಚಾರಿ ಪೊಲೀಸ್ ನಿರೀಕ್ಷಕ ದೇವರಾಜ್, ಮಹಾನಗರಪಾಲಿಕೆಯ ಅಧಿಕಾರಿ, ಚೈತನ್ಯ ರೂರಲ್ ಡೆವಲಪ್ಮೆಂಟ್ ಅಧಿಕಾರಿಗಳು ಹಾಗೂ ಆಟೋ ರಿಕ್ಷಾ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಜರಿದ್ದರು.
