ಬೆಂಗಳೂರು: ಆರು ತಿಂಗಳ ಹಿಂದೆ ನಡೆದ ವೈದ್ಯೆಯೊಬ್ಬರ ಸಾವಿನ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಎಫ್ಎಸ್ಎಲ್ ವರದಿಯ ಹಿನ್ನೆಲೆಯಲ್ಲಿ, ವೈದ್ಯೆ ಪತ್ನಿಗೆ ಅರಿವಳಿಕೆ ಔಷಧಿ ನೀಡಿ ಕೊಲೆಗೈದ ಗಂಭೀರ ಆರೋಪದ ಮೇಲೆ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.
ಆರಂಭದಲ್ಲಿ ಯುಡಿಆರ್ (ಅನೈಸರ್ಗಿಕ ಸಾವು ವರದಿ) ದಾಖಲಿಸಿದ್ದ ಮಾರತ್ಹಳ್ಳಿ ಠಾಣೆ ಪೊಲೀಸರು ಇದೀಗ ಕೊಲೆ ಪ್ರಕರಣವಾಗಿ ಪರಿವರ್ತಿಸಿದ್ದಾರೆ. ಈ ಪ್ರಕರಣದ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಡಾ.ಕೃತಿಕಾ ಎಂ.ರೆಡ್ಡಿ ಸಾವಿನ 6 ತಿಂಗಳ ಬಳಿಕ ಎಫ್ಎಸ್ಎಲ್ ವರದಿಯಲ್ಲಿ ಅಸಲಿ ಸತ್ಯ ಬಯಲಾಗಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಅರಿವಳಿಕೆ ಪದಾರ್ಥಗಳನ್ನು ಇಂಜೆಕ್ಷನ್ ಮೂಲಕ ನೀಡಿ, ಕೊಲೆ ಮಾಡಿದ್ದ ಆರೋಪದಡಿ ಪತಿ ಡಾ.ಮಹೇಂದ್ರ ರೆಡ್ಡಿ (32)ಯನ್ನು ಬಂಧಿಸಲಾಗಿದೆ. ಕಳೆದ ವರ್ಷ ಮೇ 26ರಂದು ಮಹೇಂದ್ರ ರೆಡ್ಡಿ ಮತ್ತು ಕೃತಿಕಾ ರೆಡ್ಡಿಯ ವಿವಾಹವಾಗಿತ್ತು.
ಕೃತಿಕಾ ಎಂ.ರೆಡ್ಡಿ ಅವರನ್ನು ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ 2025ರ ಏಪ್ರಿಲ್ 21ರಂದು ಮಾರತ್ತಹಳ್ಳಿ ವ್ಯಾಪ್ತಿಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ರೋಗಿಯನ್ನು ಪರೀಕ್ಷಿಸಿದ್ದ ವೈದ್ಯರು, ಈಗಾಗಲೇ ಮೃತಪಟ್ಟಿದ್ದಾರೆಂದು ದೃಢಪಡಿಸಿದ್ದರು. ಈ ಸಂಬಂಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಆಗ ಯುಡಿಆರ್ ಪ್ರಕರಣ ದಾಖಲಾಗಿತ್ತು.
ಬಳಿಕ ಕೃತ್ಯ ನಡೆದ ಸ್ಥಳಕ್ಕೆ ತೆರಳಿದ ಸೋಕೋ (ಎಸ್.ಓ.ಸಿ.ಓ) ತಂಡದವರು ಸ್ಥಳ ಪರೀಶಿಲನೆ ನಡೆಸಿ ಘಟನಾ ಸಂದರ್ಭದಲ್ಲಿ ಬಳಕೆಯಾಗಿದ್ದ ಕ್ಯಾನೂಲಾ ಸೆಟ್, ಇಂಜೆಕ್ಷನ್ ಟ್ಯೂಬ್ ಹಾಗೂ ಇತರೆ ವಸ್ತುಗಳನ್ನು ಸಂಗ್ರಹಿಸಿದ್ದರು. ಅಲ್ಲದೆ, ಮೃತದೇಹದಿಂದ ವಿಸೆರಾ ಮಾದರಿಗಳನ್ನು ಸಂಗ್ರಹಿಸಿ ಎಫ್ಎಸ್ಎಲ್ಗೆ ಕಳುಹಿಸಲಾಗಿತ್ತು.
ಎಫ್ಎಸ್ಎಲ್ನ ತಜ್ಞರು ವಿಸೆರಾ ಮಾದರಿಗಳನ್ನು ಪರೀಕ್ಷಿಸಿ, ಮೃತಳ ದೇಹದ ಅಂಗಾಂಗಳಲ್ಲಿ ಈ ಅರಿವಳಿಕೆ (Propofol) ಪದಾರ್ಥ ಪತ್ತೆಯಾಗಿದೆ ಎಂದು ತಿಳಿಸಿದ್ದಾಗಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಬಳಿಕ ಈ ಕುರಿತು ಮಾರತ್ಹಳ್ಳಿ ಪೊಲೀಸ್ ಠಾಣೆಯಲ್ಲಿ ಮೃತಳ ತಂದೆ, ವೃತ್ತಿಯಲ್ಲಿ ವೈದ್ಯನಾದ ಅಳಿಯನ ಮೇಲೆ ಅನುಮಾನ ವ್ಯಕ್ತಿಪಡಿಸಿ, ಕೊಲೆ ಮಾಡಿರಬಹುದೆಂದು 13/10/2025ರಂದು ದೂರು ಸಲ್ಲಿಸಿದ್ದರು. ಇದೀಗ ಪೊಲೀಸರು ಆರೋಪಿಯನ್ನು ಉಡುಪಿಯ ಮಣಿಪಾಲದಿಂದ ಬಂಧಿಸಿದ್ದಾರೆ ಎಂದು ಆಯುಕ್ತರು ಮಾಹಿತಿ ನೀಡಿದರು.
ವೈಟ್ ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತ ಕೆ.ಪರಶುರಾಮ್, ಮಾರತ್ ಹಳ್ಳಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಪ್ರಿಯದರ್ಶಿನಿ ಸಾಣೇಕೊಪ್ಪ, ಮಾರತ್ ಹಳ್ಳಿ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಅನಿಲ್ಕುಮಾರ್ ಹಾಗೂ ಸಿಬ್ಬಂದಿಯ ತಂಡ ಪ್ರಕರಣವನ್ನು ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
