ಬೆಂಗಳೂರು: ಕ್ರಿಪ್ಟೊ ಕರೆನ್ಸಿ ಟ್ರೇಡಿಂಗ್‌ನಲ್ಲಿ ಹೆಚ್ಚಿನ ಲಾಭ ಕೊಡಿಸುವುದಾಗಿ ನಂಬಿಸಿ ಮಹಿಳೆ ಸೇರಿದಂತೆ ವಂಚಕರ ತಂಡವೊಂದು 50 ವರ್ಷದ ವೈದ್ಯರಿಂದ ₹4.47 ಕೋಟಿ ಹಣ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ವಾಟ್ಸಾಪ್ ಮೂಲಕ ವೈದ್ಯರನ್ನು ಸಂಪರ್ಕಿಸಿದ್ದ ಆಯುಷಿ ಶರ್ಮಾ ಎಂಬಾಕೆ, ಕ್ರಿಪ್ಟೊ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಹೇಳಿ, ಟ್ರೇಡಿಂಗ್ ಅನಾಲಿಸ್ಟ್ ವಿಜಯ್ ಅನಂತ್ ಎಂಬಾತನ ಮೊಬೈಲ್ ನಂಬರ್ ನೀಡಿದ್ದಳು.
ಬಳಿಕ ವೈದ್ಯರನ್ನು ‘ಕಾಯಿನ್ ಟಿಆರ್‌ಎಸ್ ಟ್ರಾನ್ಸಾಕ್ಷನ್’ ಹೆಸರಿನ ವಾಟ್ಸಾಪ್ ಗ್ರೂಪ್‌ಗೆ ಸೇರಿಸಿ, ನಕಲಿ ಲಾಭದ ಸ್ಕ್ರೀನ್‌ಶಾಟ್‌ಗಳನ್ನು ತೋರಿಸಿ ನಂಬಿಕೆ ಮೂಡಿಸಿದ್ದರು.
ಆ.23ರಿಂದ ಸೆ.3ರವರೆಗೆ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಹಂತ ಹಂತವಾಗಿ ವೈದ್ಯರಿಂದ ₹4.47 ಕೋಟಿ ವರ್ಗಾಯಿಸಿಕೊಂಡಿದ್ದಾರೆ. ನಕಲಿ ಪ್ಲಾಟ್‌ಫಾರ್ಮ್‌ನಲ್ಲಿ ₹14 ಕೋಟಿ ಲಾಭ ಗಳಿಸಿರುವುದಾಗಿ ತೋರಿಸಲಾಗಿತ್ತು.
ಆದರೆ ಲಾಭದ ಹಣವನ್ನು ಹಿಂಪಡೆಯಲು ಸಾಧ್ಯವಾಗದಿದ್ದಾಗ, ‘ಸೆಕ್ಯೂರಿಟಿ ಕ್ಲಿಯರೆನ್ಸ್’, ತೆರಿಗೆ, ಪ್ರೊಸೆಸಿಂಗ್ ಶುಲ್ಕ ಸೇರಿದಂತೆ ವಿವಿಧ ಕಾರಣಗಳನ್ನು ನೀಡಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಇದರಿಂದ ಅನುಮಾನಗೊಂಡ ವೈದ್ಯರು ತಾವು ವಂಚನೆಗೊಳಗಾಗಿರುವುದನ್ನು ಅರಿತು 1930 ಸೈಬರ್ ಕ್ರೈಂ ಹೆಲ್ಪ್‌ಲೈನ್‌ಗೆ ದೂರು ನೀಡಿದ್ದಾರೆ.
ಕೇಂದ್ರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಂಚನೆಗೆ ಬಳಸಿದ ಬ್ಯಾಂಕ್ ಖಾತೆಗಳನ್ನು ತಾತ್ಕಾಲಿಕವಾಗಿ ಫ್ರೀಜ್ ಮಾಡಿ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
