ಶಿವಮೊಗ್ಗ: ನಗರದ ಹೊರ ವಲಯದಲ್ಲಿರುವ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿಗೆ ನೀಡಲು ಬಿಸ್ಕೆಟ್ ಪ್ಯಾಕೆಟ್ನಲ್ಲಿ ಅಕ್ರಮವಾಗಿ ಗಾಂಜಾ, ಸಿಗರೇಟ್ ಕೊಂಡೊಯ್ಯಲು ಯತ್ನಿಸಿದ ಇಬ್ಬರು ಯುವಕರನ್ನು ತುಂಗಾ ನಗರ ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿಯ ರಾಹಿಲ್ (19) ಹಾಗೂ ತಸೀರುಲ್ಲಾ (19) ಬಂಧಿತರು.
ನಿನ್ನೆ (ಶುಕ್ರವಾರ) ಭದ್ರಾವತಿಯ ರಾಹಿಲ್ ಮತ್ತು ತಸೀರುಲ್ಲಾ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಮಹಮ್ಮದ್ ಗೌಸ್ ಅಲಿಯಾಸ್ ಜಂಗ್ಲಿ ಎಂಬಾತನ ಭೇಟಿಗೆ ಬಂದಿದ್ದರು. ಕಾರಾಗೃಹದ ನಿಯಮಾವಳಿಯಂತೆ ಆಧಾರ್ ಕಾರ್ಡ್ ತೋರಿಸಿ, ಮಹಮ್ಮದ್ ಗೌಸ್ಗೆ ಕೊಡಲು ಬಿಸ್ಕೆಟ್ ಪ್ಯಾಕ್ ತೆಗೆದುಕೊಂಡು ಹೋಗುತ್ತಿದ್ದರು.
ಇಬ್ಬರ ಚಲನವಲನ ನೋಡಿ ಅನುಮಾನಗೊಂಡು ಕಾರಾಗೃಹದ ಭದ್ರತೆ ನೋಡಿಕೊಳ್ಳುವ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ, ಬಿಸ್ಕೆಟ್ ಪ್ಯಾಕೆಟ್ ಪರಿಶೀಲನೆ ಮಾಡಿದಾಗ ಕಪ್ಪು ಗಮ್ ಟೇಪ್ನಲ್ಲಿ ಸುತ್ತಿದ್ದ ಮೂರು ಕಪ್ಪು ಬಣ್ಣದ ವಸ್ತುಗಳು ಕಂಡು ಬಂದಿವೆ. ತಪಾಸಣೆ ವೇಳೆ ಒಂದು ಗಾಂಜಾ ಪ್ಯಾಕೆಟ್ ಹಾಗೂ ಎರಡು ಸಿಗರೇಟ್ ಪ್ಯಾಕೆಟ್ ಪತ್ತೆಯಾಗಿದೆ.
ನಂತರ ಸಿಬ್ಬಂದಿ, ನಿಷೇಧಿತ ವಸ್ತುಗಳನ್ನು ತಂದಿರುವ ಆರೋಪದಡಿ ಇಬ್ಬರನ್ನು ಹಿಡಿದು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ಪಿ.ರಂಗನಾಥ್ ಅವರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ರಂಗನಾಥ್ ತುಂಗಾ ನಗರ ಪೊಲೀಸರಿಗೆ ಇಬ್ಬರನ್ನು ಒಪ್ಪಿಸಿ, ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ತುಂಗಾನಗರ ಪೊಲೀಸರು ಇಬ್ಬರ ವಿರುದ್ಧ ಎನ್ಡಿಪಿಎ ಪ್ರಕರಣ ದಾಖಲಿಸಿ, ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಕಾರಾಗೃಹಕ್ಕೆ ಕಳುಹಿಸಿದ್ದಾರೆ.
