ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಕೋಟ್ಯಂತರ ಜನ ಅನುಕೂಲ ಪಡೆಯುತ್ತಿದ್ದಾರೆ. ಅದರಲ್ಲೂ ಗೃಹಲಕ್ಷ್ಮಿ ಯೋಜನೆಯಲ್ಲಿ ಸಿಗುವ 2000 ಸಹಾಯಧನ ಕೂಡಿಟ್ಟು, ಹಲವು ಮಹಿಳೆಯರು ಟಿವಿ, ಫ್ರಿಡ್ಸ್, ಸ್ಕೂಟರ್ ಹೀಗೆ ಹಲವು ವಸ್ತುಗಳನ್ನು ಖರೀದಿಸಿದ್ದರು. ಇದೀಗ ಗ್ಯಾರಂಟಿ ಯೋಜನೆಯ ಫಲಾನುಭವಿ ಮಹಿಳೆಯೊಬ್ಬರು, ಆಯುಧ ಪೂಜೆ ದಿನ ಹೊಸ ವಾಷಿಂಗ್ ಮಷಿನ್ ಖರೀದಿಸಿ ಪೂಜೆ ಸಲ್ಲಿಸಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಿಎಂ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ರಾಮನಗರದ ಗ್ಯಾರಂಟಿ ಯೋಜನೆಯ ಫಲಾನುಭವಿ ಮಹಿಳೆ ಬಿ.ಕೆ.ತುಳಸಿ ಅವರು ಕಳೆದ ಏಳು ತಿಂಗಳ ಗೃಹಲಕ್ಷ್ಮಿ ಹಣ ಕೂಡಿಟ್ಟು ಮಹಾನವಮಿಯ ದಿನ ಹೊಸ ವಾಷಿಂಗ್ ಮೆಷಿನ್ ಖರೀದಿಸಿ, ಪೂಜಿಸುತ್ತಿರುವ ವೀಡಿಯೋ ನನ್ನ ಹಬ್ಬದ ಸಂಭ್ರಮವನ್ನು ಇಮ್ಮಡಿಯಾಗಿಸಿತು.
ಸ್ತ್ರೀಸಬಲೀಕರಣದ ಆಶಯದೊಂದಿಗೆ ಜಾರಿಗೆ ಕೊಟ್ಟ ಗೃಹಲಕ್ಷ್ಮಿ ಯೋಜನೆಯು ಸ್ತ್ರೀಶಕ್ತಿಯನ್ನು ಆರಾಧಿಸುವ ನವರಾತ್ರಿಯಲ್ಲಿ ಮಹಿಳೆಯೊಬ್ಬರ ಸಂಭ್ರಮಕ್ಕೆ ಕಾರಣವಾಗಿರುವುದು ಹೆಚ್ಚು ಅರ್ಥಪೂರ್ಣ ಮತ್ತು ಸಾರ್ಥಕವೆನಿಸಿದೆ.. ಇಂತಹ ಇನ್ನಷ್ಟು ಕುಟುಂಬಗಳ ಖುಷಿಗೆ ನಮ್ಮ ಯೋಜನೆ ಸಾಕ್ಷಿಯಾಗಲಿ ಎಂದು ಆಶಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
