Trending

ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ವಿರೋಧಿಸಿದ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲೂ ವಜಾ

Spread the love

ನವದೆಹಲಿ: ನಾಡಹಬ್ಬ ಮೈಸೂರು ದಸರಾ ಅನ್ನು ಉದ್ಘಾಟಿಸಲು ಲೇಖಕಿ, ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್  ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿರುವ ಕ್ರಮವನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲೂ  ವಜಾ ಆಗಿದೆ.

ಈ ಹಿಂದೆ ಕರ್ನಾಟಕ ಹೈಕೋರ್ಟ್‌ನಲ್ಲೂ ಅರ್ಜಿದಾರರಿಗೆ ಸೋಲಾಗಿದ್ದು, ಈ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂಗೆ ಹೋಗಿದ್ದರು.

ಮೈಸೂರು ಮಾಜಿ ಸಂಸದ ಪ್ರತಾಪ್‌ ಸಿಂಹ ಸೇರಿದಂತೆ ಕೆಲ ಬಿಜೆಪಿ ನಾಯಕರು ಮತ್ತು ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಹೈಕೋರ್ಟ್​ಗೆ ಅರ್ಜಿ ಹಾಕಿದ್ದರು. ಹೈಕೋರ್ಟ್​ ಈ ಅರ್ಜಿ ವಜಾ ಮಾಡಿತ್ತು, ನಂತರ ಹೈಕೋರ್ಟ್​ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದು, ಇಂದು ನಡೆದ ವಿಚಾರಣೆಯಲ್ಲಿ ಅರ್ಜಿ ವಜಾಗೊಳಿಸಲಾಗಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಸಂಕ್ಷಿಪ್ತ ವಿಚಾರಣೆಯ ನಂತರ ಈ ತೀರ್ಪು ನೀಡಿದೆ. ಹೀಗಾಗಿ ಸೆಪ್ಟೆಂಬರ್ 22ರಂದು ಬಾನು ಮುಷ್ತಾಕ್ ಅವರಿಂದ ಉದ್ಘಾಟನೆ ನಡೆಯುವುದು ದೃಢವಾಗಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಪಿ.ಬಿ. ಸುರೇಶ್ ಅವರು, ಹಿಂದೂಯೇತರ ವ್ಯಕ್ತಿಗೆ ದೇವಸ್ಥಾನದಲ್ಲಿ ಪೂಜೆ ನೆರವೇರಿಸುವ ಅವಕಾಶ ನೀಡುವುದು ಧಾರ್ಮಿಕ ಆಚರಣೆಗಳನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದರು. “ಇದು ಸಂಪೂರ್ಣವಾಗಿ ರಾಜಕೀಯ. ಧಾರ್ಮಿಕ ಚಟುವಟಿಕೆಗಾಗಿ ಅವರನ್ನು ದೇವಸ್ಥಾನಕ್ಕೆ ಕರೆತರಲು ಯಾವುದೇ ಕಾರಣವಿಲ್ಲ” ಎಂದು ಅವರು ಹೇಳಿದರು. ಆಹ್ವಾನಿತರು ಹಿಂದೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡಿದ್ದಾರೆ ಎಂದೂ ಆಕ್ಷೇಪಿಸಿದರು.

ಆದರೆ ನ್ಯಾಯಮೂರ್ತಿ ನಾಥ್ ಅವರು ʼಅರ್ಜಿ ವಜಾಗೊಳಿಸಲಾಗಿದೆʼ ಎಂದು ಘೋಷಿಸಿದರು. ʼದಸರಾ ಉದ್ಘಾಟನೆಗೆ ಅವಕಾಶ ನೀಡುವುದರಿಂದ ಅರ್ಜಿದಾರರ ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ನಮಗೆ ಮನವರಿಕೆಯಾಗಿಲ್ಲʼ ಎಂದು ಪೀಠ ತಿಳಿಸಿತು.

ನಿನ್ನೆಯೇ ಸುಪ್ರೀಂ ಕೋರ್ಟ್‌ನಲ್ಲಿ ತುರ್ತು ಪಟ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು. ಚೀಫ್ ಜಸ್ಟಿಸ್ ಬಿ.ಆರ್. ಗವಾಯ್ ಅವರು ಅದನ್ನು ಇಂದು ವಿಚಾರಣೆಗೆ ತಂದಿದ್ದರು. ಸಂಕ್ಷಿಪ್ತ ವಾದಗಳ ನಂತರ ಅರ್ಜಿಯನ್ನು ವಜಾ ಮಾಡಲಾಯಿತು.

[pj-news-ticker]