ಮೈಸೂರು: ಪ್ರಚೋದನಕಾರಿ ಹೇಳಿಕೆ ನೀಡುವ ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ಗಡಿಪಾರಿನ ವಿಚಾರದ ಬಗ್ಗೆ ಪೊಲೀಸರು ಕ್ರಮ ತೆಗೆದು ಕೊಳ್ಳುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ಗಡಿಪಾರಿಗೆ ಕೆಲ ಸಂಘಟನೆಗಳ ಒತ್ತಾಯಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.
ದಸರಾ ಉದ್ಘಾಟಕರ ಬದಲಾವಣೆಗೆ ಕಾನೂನು ಸಮರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೆಲವರು ಕೋರ್ಟ್ ಗೆ ಹೋಗಿದ್ದಾರೆ. ಕೋರ್ಟ್ ಅದನ್ನು ನೋಡಿಕೊಳ್ಳುತ್ತದೆ. ದಸರಾ ಸಾಂಸ್ಕೃತಿಕವಾಗಿ ನಡೆಯುತ್ತಿರುವ ಕಾರ್ಯಕ್ರಮ. ದಸರಾ ಎಲ್ಲರ ಹಬ್ಬ; ಒಂದು ಜಾತಿ ಧರ್ಮಕ್ಕೆ ಸೇರಿದ ಹಬ್ಬವಲ್ಲ. ಮುಸ್ಲಿಂ, ಕ್ರಿಸ್ಚಿಯನ್ ಎಲ್ಲರೂ ಬರ್ತಾರೆ. ಇದನ್ನು ಬೇರೆ ರೀತಿ ರಾಜಕೀಯವಾಗಿ ವಿರೋಧ ಮಾಡುತ್ತಾರೆ. ವಿರೋಧ ಮಾಡುವವರನ್ನ ಈ ಬಗ್ಗೆ ಕೇಳಿ ಎಂದರು.
ಧರ್ಮಸ್ಥಳ ಪ್ರಕರಣ ತನಿಖೆ ಅನಗತ್ಯ ವಿಳಂಬವಾಗುತ್ತಿದೆ ಎಂದು ನನಗೇನೂ ಅನಿಸುತ್ತಿಲ್ಲ. ಸರ್ಕಾರ ತನಿಖೆಯಲ್ಲಿ ಯಾವುದೇ ತಲೆ ಹಾಕಿಲ್ಲ. ತನಿಖೆ ವಿಳಂಬವಾಗುತ್ತಿಲ್ಲ ಎಂದರು.
ಬಿಜೆಪಿ ಶಾಸಕರ ಮೇಲೆ ಎಫ್ ಐ ಆರ್ ವಿಚಾರಕ್ಕೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಹಿಂದೂಗಳ ಟಾರ್ಗೆಟ್ ಅಲ್ಲ. ಪ್ರಚೋದನೆ ಆಗುವ ರೀತಿ ವರ್ತನೆಯಿದೆ. ಹೀಗಾಗಿ ಕಾನೂನು ವ್ಯಾಪ್ತಿಯಲ್ಲಿ ಎಫ್ ಐಆರ್ ದಾಖಲಾಗಿದೆ ಎಂದರು.
ನಾನು ಕೂಡ ಹಿಂದೂ. ನನ್ನ ಹೆಸರಿನಲ್ಲೇ ಎರಡು ದೇವರು ಇವೆ. ಸಿದ್ದ ಎಂದರೆ ಈಶ್ವರ. ರಾಮ ಎಂದರೆ ವಿಷ್ಣು. ಪ್ರಚೋದನಕಾರಿ ಭಾಷಣ ಮಾಡಿದವರನ್ನು ಸುಮ್ಮನೆ ಬಿಡಲು ಆಗುತ್ತಾ? ಸಮಾಜದ ಶಾಂತಿಗೆ ಭಂಗ ತಂದವರ ಮೇಲೆ ಕ್ರಮ ಕೈ ಗೊಳ್ಳುವುದು ತಪ್ಪಲ್ಲ. ಪೊಲೀಸರು ನಿಯಮದ ಪ್ರಕಾರ ಕೇಸ್ ಹಾಕಿದ್ದಾರೆ. ಇದರಲ್ಲಿ ರಾಜಕೀಯ ಎಲ್ಲಿದೆ? ಇದನ್ನು ಹಿಂದೂ ಟಾರ್ಗೆಟ್ ಎಂದರೆ ಹೇಗೆ ಹೇಳಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
