Trending

ರಾಜ್ಯದ ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

Spread the love

ಶಿವಮೊಗ್ಗ: ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಹಾಗೂ ಈ ಕುರಿತು ರಾಜ್ಯದ ಸಂಸದರು ಧ್ವನಿ ಎತ್ತುತ್ತಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹರಿಹಾಯ್ದರು.

ಭದ್ರಾ ಅಣೆಕಟ್ಟಿಗೆ ಬಾಗಿನ ಅರ್ಪಿಸಿ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ನೀರಾವರಿಗೆ 11 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದೆ. ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿ ನೀಡುವುದಾಗಿ ಬಜೆಟ್​ನಲ್ಲಿ ಘೋಷಣೆ ಮಾಡಿದ್ದರು.

ಇದನ್ನು ನಂಬಿಕೊಂಡು ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಹ ಘೋಷಣೆ ಮಾಡಿದ್ದರು. ನಾನು ಬಿಜೆಪಿ ಸಂಸದರಿಗೆ ಈ ಬಗ್ಗೆ ಕೇಂದ್ರದ ಬಳಿ ಹೋಗಿ ಮಾತನಾಡಿ ಅಂದ್ರೆ ಯಾರೊಬ್ಬರು ಬಾಯಿ ಬಿಡುವುದಿಲ್ಲ ಎಂದು ಕುಟುಕಿದರು.

ನಾನು ಸಹ ಎರಡು ಬಾರಿ ನಿರ್ಮಲಾ ಸೀತಾರಾಮನ್ ಅವರನ್ನು ಹಾಗೂ ಕೇಂದ್ರ ನೀರಾವರಿ ಸಚಿವರನ್ನು ಭೇಟಿ ಮಾಡಿದ್ರೂ ಪ್ರಯೋಜನವಾಗಿಲ್ಲ. ಇದನ್ನು ಬಿಜೆಪಿ ಸಂಸದರಿಗೆ ಕೇಳಬೇಕು ಎಂದು ಜನರಲ್ಲಿ ಮನವಿ ಮಾಡಿದ ಅವರು, ಚನ್ನಗಿರಿಯ ಕೆರೆಗಳನ್ನು ತುಂಬಿಸಲು 352 ಕೋಟಿ ರೂಪಾಯಿ ನೀಡಿದ್ದೇನೆ. ಈಗ ಕೆಲಸ ಮಾಡಿದರೆ ಶಾಸಕರಿಗೆ ಚುನಾವಣೆ ಸಂದರ್ಭದಲ್ಲಿ ಶಕ್ತಿ ಕೊಟ್ಟಂತೆ ಆಗುತ್ತದೆ. ರಾಜ್ಯದ‌ ನೀರಾವರಿ ವಿಚಾರದ ಬಗ್ಗೆ ಒಮ್ಮೆ ಕೇಂದ್ರ ಸಚಿವರಾದ ಪ್ರಲ್ಹಾದ್​ ಜೋಶಿ ಅವರೊಂದಿಗೆ ಮಾತನಾಡಿದ್ದೇನೆ. ಹಾಗೇ ನನ್ನ ಜೊತೆ ವಿ.ಸೋಮಣ್ಣ ಎರಡು ಬಾರಿ ಬಂದಿದ್ದರು. ಆದರೆ ಅದು ಕೇವಲ ಖಾಲಿ ಬುಟ್ಟಿ ಅಷ್ಟೆ ಎಂದು ಟೀಕಿಸಿದರು.

ಬಿಜೆಪಿ ಸಂಸದರು ರಾಜೀನಾಮೆ ನೀಡಲಿ: ಆಲಮಟ್ಟಿ ಅಣೆಕಟ್ಟನ್ನು 524 ಮೀಟರ್​ಗೆ ಎತ್ತರಿಸಲು 2015 ರಲ್ಲೇ ತೀರ್ಪು ಬಂತು. ಈ ಸಂಬಂಧ ನಾವು ಹೋಗಿ ಕೇಂದ್ರದವರನ್ನು ಭೇಟಿ ಮಾಡಿ ಬಂದರೂ ಅವರು ಎತ್ತರಿಸಲು ಅನುಮತಿ ನೀಡುತ್ತಿಲ್ಲ. ಆ ಭಾಗದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಒಬ್ಬ ಸಂಸದನೂ ಆ ಬಗ್ಗೆ ಬಾಯಿ ಬಿಡ್ತಿಲ್ಲ. ಹಿಂದೆ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದ್ದಾಗ ಈ ಕೆಲಸವನ್ನು ಮಾಡಲಿಲ್ಲ. ಎರಡು ಸಲ ಸಭೆ ಕರೆದಿದ್ದರೂ ಸಹ ಮೀಟಿಂಗ್ ಮಾಡಲಿಲ್ಲ ಎಂದರು.

ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ 519 ಮೀಟರ್​ನಿಂದ 524 ಮೀಟರ್ ಎತ್ತರಿಸಲು ನಾವು ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಮಿಸ್ಟರ್ ಫಡ್ನವೀಸ್ ಇದು ನಿಮ್ಮ ಹಕ್ಕಲ್ಲ. ಇದು ಕರ್ನಾಟಕ ರಾಜ್ಯದ ಜನರ ಹಕ್ಕು. ರಾಜ್ಯದ ಸಂಸದರೆ ನಿಮಗೆ ಬದ್ಧತೆ ಇದ್ದರೆ ಕಳಸ ಬಂಡೂರಿ, ಮೇಕೆದಾಟು, ಭದ್ರಾ ಮೇಲ್ದಂಡೆ ಹಾಗೂ ಕೃಷ್ಣ ಯೋಜನೆಗೆ ಗೆಜೆಟ್ ನೋಟಿಫಿಕೇಶನ್​ಗೆ ಪ್ರಯತ್ನ ಮಾಡಬೇಕು. ಇಲ್ಲವಾದಲ್ಲಿ ರಾಜೀನಾಮೆ ನೀಡಿ, ಚುನಾವಣೆಗೆ ಬನ್ನಿ ಎಂದು ಸವಾಲೆಸೆದರು.

ಭದ್ರಾ ಈಗ ಬಯಲು ಸೀಮೆಗೂ ಜೀವನಾಡಿ: ಇಂದು ನಾನು ಬಹಳ ಸಂತೋಷದಿಂದ ಭದ್ರಾಗೆ ಬಾಗಿನ ಅರ್ಪಿಸಿ ಬಂದಿದ್ದೇನೆ. ಭದ್ರಾ ಅಣೆಕಟ್ಟು ತುಂಬಿರುವುದರಿಂದ ರೈತನ ಜೀವನ ಸುಭದ್ರವಾಗಿದೆ ಎಂಬುದಕ್ಕೆ ನಿಮ್ಮ ಧ್ವನಿಯೇ ಸಾಕ್ಷಿಯಾಗಿದೆ.‌ ಭದ್ರಾ ಅಣೆಕಟ್ಟು ಐದು ಜಿಲ್ಲೆಗಳಿಗೆ ಜೀವನಾಡಿಯಾಗಿದೆ. ಭದ್ರಾ ತುಂಬಿದ್ರೆ ನಮ್ಮ ಬಯಲು ಸೀಮೆಗೂ ಬಹಳ ಅನುಕೂಲವಾಗುತ್ತದೆ.‌ ನಿಮ್ಮೆಲ್ಲರ ಹೃದಯ ಶ್ರೀಮಂತಿಕೆಯಿಂದ ಬಯಲು ಸೀಮೆ ಜನರಿಗೂ ಅನುಕೂಲವಾಗಿದೆ ಎಂದು ಹೇಳಿವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ ಎಂದರು.

[pj-news-ticker]