ನವದೆಹಲಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತ ಪ್ರಕರಣ, ನಡೆಯುತ್ತಿರುವ ಬೆಳವಣಿಗೆಗಳು ಮತ್ತು ನಿರಂತರ ಅಪಪ್ರಚಾರದ ವಿರುದ್ಧ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ಮಾಡಿಸಬೇಕು ಎಂದು ರಾಜ್ಯದ ಮಠಾಧೀಶರು ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಪಂಚಮಸಾಲಿ ಲಿಂಗಾಯತ ಮಠದ ವಚನಾನಂದ ಸ್ವಾಮೀಜಿ ನೇತೃತ್ವದ ಸನಾತನ ಸಂತರ ನಿಯೋಗದಲ್ಲಿ ಮಂಗಳೂರಿನ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸೇರಿ ವಿವಿಧ ಪೀಠಗಳ 8 ಸ್ವಾಮೀಜಿಗಳ ನಿಯೋಗ ಶಾ ಅವರನ್ನು ದೆಹಲಿ ಕಚೇರಿಯಲ್ಲಿ ಭೇಟಿ ಮಾಡಿ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ.
ಎಸ್ ಐ ಟಿ ತನಿಖೆ ಬಗ್ಗೆ ಆಕ್ಷೇಪವಿಲ್ಲ, ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಬಯಲಾಗಬೇಕು.ಬೇರೆ ದೇಗುಲಗಳನ್ನೂ ಗುರಿಯಾಗಿಸಿಕೊಳ್ಳಲಾಗುತ್ತಿದೆ. ಇದನ್ನೆಲ್ಲಾ ನಿಲ್ಲಿಸಲು ಪ್ರಕರಣವನ್ನ ಶೀಘ್ರ ಎನ್ ಐ ಎ ತನಿಖೆಗೆ ವಹಿಸಬೇಕು ಎಂದು ಮನವಿ ನೀಡಲಾಗಿದೆ.
ಸ್ವಾಮೀಜಗಳ ಬಳಿ ಧರ್ಮಸ್ಥಳ ಬುರುಡೆ ಪ್ರಕರಣದ ಮಾಹಿತಿಯನ್ನೂ ಅಮಿತ್ ಶಾ ಪಡೆದಿದ್ದಾರೆ ಎನ್ನಲಾಗಿದೆ.ಧರ್ಮಸ್ಥಳದ ಬಾಹುಬಲಿ ಬೆಟ್ಟದಲ್ಲಿ ಉತ್ಖನನ ಕಾರ್ಯಾಚರಣೆ ಬಗ್ಗೆ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಕ್ಯಾಬಿನೆಟ್ ನೇತೃತ್ವದಲ್ಲಿ ಸಭೆ
ಧರ್ಮಸ್ಥಳ ಪ್ರಕರಣ ಬಗ್ಗೆ ಕ್ಯಾಬಿನೆಟ್ ನೇತೃತ್ವದಲ್ಲಿ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ನೀವು ಸಮಾಜವನ್ನ ಜಾಗೃತಿಗೊಳಿಸಿ ಎಂದು ಸ್ವಾಮೀಜಿಗಳಿಗೆ ಸೂಚನೆ ನೀಡಿ ಧರ್ಮ ಕ್ಷೇತ್ರಗಳ ವಿರುದ್ಧದ ಅಪಪ್ರಚಾರಕ್ಕೆ ಕಡಿವಾಣ ಹಾಕಲು ಹೊಸ ಕಾನೂನು ತರುವ ಭರವಸೆಯನ್ನು ಅಮಿತ್ ಶಾ ನೀಡಿದ್ದಾರೆ.
