ಶಿವಮೊಗ್ಗ: ಮನೆಯ ವಿಚಾರಕ್ಕೆ ಒಡಹುಟ್ಟಿದ ಅಣ್ಣನನ್ನೇ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ತಮ್ಮನನ್ನು ತುಂಗಾನಗರ ಠಾಣೆ ಪೊಲೀಸರು ಕೆಲವೇ ಗಂಟೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜುಲೈ 27ರ ಬೆಳಗ್ಗೆ ಶಿವಮೊಗ್ಗ ನಗರದ ಮೇಲಿನ ತುಂಗಾನಗರದಲ್ಲಿ ಮಣಿಕಂಠ ಎಂಬಾತ ತನ್ನ ಮನೆಯಲ್ಲಿಯೇ ಕೊಲೆಯಾಗಿದ್ದ. ಮಣಿಕಂಠ ಹಾಗೂ ಆತನ ತಮ್ಮ ಸಂತೋಷ್ ಒಟ್ಟಿಗೆ ವಾಸವಾಗಿದ್ದರು. ಭಾನುವಾರ ಬೆಳಗ್ಗೆ ಮನೆ ಪಕ್ಕದಲ್ಲಿಯೇ ವಾಸವಾಗಿರುವ ಸಹೋದರಿಯರು ಟೀ ಕೊಡಲೆಂದು ಹೋದಾಗ ಕೊಲೆ ಪ್ರಕರಣ ಬಯಲಿಗೆ ಬಂದಿತ್ತು.
ಮಣಿಕಂಠನ ತಲೆ ಮೇಲೆ ಚಪ್ಪಡಿ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದರು. ಆದರೆ, ಈ ವೇಳೆ ಕೊಲೆಯಾದವನ ಸಹೋದರ ಸಂತೋಷ್ ಕಾಣೆಯಾಗಿದ್ದ. ಹೀಗಾಗಿ, ಅನುಮಾನಗೊಂಡ ಪೊಲೀಸರು ಮೊದಲು ಸಂತೋಷ್ಗಾಗಿ ಹುಡುಕಾಟ ನಡೆಸಿದ್ದಾರೆ. ಬಳಿಕ ಆತನನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯ ವಿಚಾರಕ್ಕೆ ಕೊಲೆ: ಮೃತ ಮಣಿಕಂಠ ಹಾಗೂ ಸಂತೋಷ್ ಒಂದೇ ಮನೆಯಲ್ಲಿ ವಾಸವಿದ್ದು, ಮಣಿಕಂಠನಿಗೆ ಮದುವೆ ಆಗಿರಲಿಲ್ಲ. ಆರೋಪಿ ಸಂತೋಷ್ನಿಗೆ ಮದುವೆ ಆಗಿದ್ದು, ಈತ ಕುಡಿದು ಗಲಾಟೆ ಮಾಡುತ್ತಾನೆಂದು ಹೆಂಡತಿ ಆತನನ್ನು ಬಿಟ್ಟು ಹೋಗಿದ್ದಾಳೆ.
ಸಹೋದರರು ವಾಸವಿದ್ದ ಮನೆಯು ಇವರ ತಂದೆಯ ಹೆಸರಿನಲ್ಲಿದೆ. ಹೀಗಾಗಿ, ಮನೆಯ ಹಂಚಿಕೆ ವಿಚಾರವಾಗಿ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಘಟನೆ ನಡೆದ ರಾತ್ರಿ ಕುಡಿದುಕೊಂಡು ಬಂದ ಸಂತೋಷ್ ಮಣಿಕಂಠನ ಜೊತೆ ಮತ್ತೆ ಗಲಾಟೆ ಆರಂಭಿಸಿದ್ದಾನೆ.
ನಂತರ ಜಗಳ ವಿಕೋಪಕ್ಕೆ ಹೋದಾಗ ಮೊದಲು ಗುದ್ದಲಿಯಿಂದ ಸಂತೋಷ್ ಮಣಿಕಂಠನ ತಲೆಗೆ ಹೊಡೆದಿದ್ದಾನೆ. ಇದರಿಂದ ಮಣಿಕಂಠ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆದರೂ ಕೋಪ ತಣ್ಣಗಾಗದೇ, ಮನೆಯ ಹೊರಗೆ ಇದ್ದ ಚಪ್ಪಡಿ ಕಲ್ಲನ್ನು ಆತನ ತಲೆ ಮೇಲೆ ಹಾಕಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಂತರ ಕುಡಿದ ನಶೆಯಲ್ಲಿದ್ದ ಆರೋಪಿ ಸಹೋದರನ ಮೃತದೇಹದ ಪಕ್ಕದಲ್ಲಿಯೇ ಮಲಗಿದ್ದಾನೆ. ಬೆಳಗ್ಗೆ ಎಚ್ಚರವಾಗುತ್ತಿದ್ದಂತೆ, ಹೆದರಿಕೊಂಡು ಮನೆಯಿಂದ ಪರಾರಿಯಾಗಿದ್ದ. ಈತನನ್ನು ಹುಡುಕಿ, ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.
ಸದ್ಯ ತುಂಗಾ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ಸಿಬ್ಬಂದಿಯ ಚುರುಕು ಕಾರ್ಯಾಚರಣೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
