ಬೆಂಗಳೂರು : ಹಾಲಿ ಯಶವಂತಪುರ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಇದರ ಬೆನ್ನಲ್ಲೇ ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೂ 23 ತಿಂಗಳು ಸಮಯ ಇದೆ. ಆದ್ರೆ, ಅದಕ್ಕೂ ಮುಂಚೆಯೂ ಮಾಜಿ ಸಿಎಂ, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರಾದ ಬಿಎಸ್ ಯಡಿಯೂರಪ್ಪ ಅವರು ಯಶವಂತಪುರ ಬಿಜೆಪಿ ಅಭ್ಯರ್ಥಿ ಎಂದು ಬಿಜೆಪಿ ರೈತ ಮೋರ್ಛಾ ರಾಜ್ಯ ಉಪಾಧ್ಯಕ್ಷ ರುದ್ರೇಶ್ ಅವರನ್ನು ಘೋಷಣೆ ಮಾಡಿದ್ದಾರೆ.
ಇದು ಮಿತ್ರ ಪಕ್ಷ ಜೆಡಿಎಸ್ ಅಸಮಾಧಾನಕ್ಕೆ ಕಾರಣವಾಗಿದ್ದು, ಮೈತ್ರಿಯಲ್ಲಿ ಅಲ್ಲೋಕ ಕಲ್ಲೋಲ ಸೃಷ್ಟಿಸಿದೆ.
ರುದ್ರೇಶ್ ಅವರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ನಗರದ ಹೊರವಲಯದಲ್ಲಿರುವ ಅವರ ನಿವಾಸಕ್ಕೆ ಶುಭ ಕೋರಲು ಯಡಿಯೂರಪ್ಪ ತೆರಳಿದ್ದರು. ಆ ವೇಳೆ, ಮುಂದಿನ ವಿಧಾನಸಭಾ ಚುನಾವಣೆಗೆ ಯಶವಂತಪುರ ಕ್ಷೇತ್ರದಿಂದ ಎಂ.ರುದ್ರೇಶ್ ಸ್ಪರ್ಧಿಸಲಿದ್ದಾರೆ. ನಿಸ್ವಾರ್ಥ ಸೇವೆಯಿಂದ ಸಮಾಜಮುಖಿ ಕೆಲಸ ಮಾಡುವವರಿಗೆ ಯಾವಾಗಲೂ ನನ್ನ ಆಶೀರ್ವಾದ ಇದ್ದೇ ಇರುತ್ತದೆ. ರುದ್ರೇಶ್ ಅವರಿಗೆ ಜನರ ಆಶೀರ್ವಾದವೂ ಸಿಗುವಂತೆ ಶ್ರಮಿಸಲಾಗುವುದು. ಶಾಸಕರಾಗಿ ರುದ್ರೇಶ್ ಅವರ ಆಯ್ಕೆಯನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದರು ಮೈತ್ರಿ ಪಕ್ಷ ಜೆಡಿಎಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ತಂದೆ ಹೇಳಿಕೆಗೆ ಸಮಜಾಯಿಷಿ ನೀಡಿದ ಮಗ
ಸಾಮಾಜಿಕ ಜಾಲತಾಣಗಳಲ್ಲಿ ಜೆಡಿಎಸ್ ಬೆಂಬಲಿತ ಪೇಜ್ ಗಳು ಬಿಎಸ್ ಯಡಿಯೂರಪ್ಪ ಹೇಳಿಕೆಯನ್ನು ಖಂಡಿಸಿದ್ದು, ಬಿಎಸ್ ವೈ ವಿರುದ್ಧ ಕಿಡಿಕಾರಿದ್ದಾರೆ. ಇದು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಯಡಿಯೂರಪ್ನವರಪ ಪುತ್ರ, ಬಿಜೆಪಿ ರಾಜ್ಯಾದ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿ, ಯಾರು ಅಭ್ಯರ್ಥಿ ಆಗಬೇಕು ಎಂದು ರಾಜ್ಯದ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಆಗಿ ರಾಷ್ಟ್ರೀಯ ಮಟ್ಟದಲ್ಲಿ ತೀರ್ಮಾನ ಅಗುತ್ತದೆ.
ಯಶವಂತಪುರ ಮಾತ್ರ ಅಲ್ಲ. ಶಿಕಾರಿಪುರ ಸೇರಿದಂತೆ ಯಾವುದೇ ಕ್ಷೇತ್ರದ ಅಭ್ಯರ್ಥಿ ಯಾರು ಎಂದು ಕೋರ್ ಕಮಿಟಿಯಲ್ಲಿ ಚರ್ಚೆ ಆಗಿ ವರಿಷ್ಠರು ತೀರ್ಮಾನ ಮಾಡಬೇಕಾಗುತ್ತದೆ . ನಮ್ಮದು ರಾಷ್ಟ್ರೀಯ ಪಕ್ಷವಾಗಿದೆ. ರುದ್ರೇಶ್ ಮೇಲಿನ ಅಭಿಮಾನದಿಂದ ಯಡಿಯೂರಪ್ಪನವರು ಹೇಳಿರಬಹುದು. ಯಡಿಯೂರಪ್ಪನವರು ಹಿರಿಯರು, ಪಕ್ಷದ ಸಂಸದೀಯ ಮಂಡಳಿ ಸದಸ್ಯರು ಎಂದು ಸ್ಪಷ್ಟಪಡಿಸಿದರು.
ಮೊದಲೇ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಕೆಲ ವಿಚಾರಕ್ಕೆ ಮುಸುಕಿನ ಗುದ್ದಾಟಗಳು ನಡೆದಿವೆ. ಇದಕ್ಕೆ ಪೂರಕವೆಂಬಂತೆ ಕ್ಷೇತ್ರದಲ್ಲಿ ಕೆಲಸ ಮಾಡಿ ಮೇಲಿಂದ ಟಿಕೆಟ್ ತರುವುದು ನನ್ನ ಜವಾಬ್ದಾರಿ ಎಂದು ಸ್ವತಃ ಕೇಂದ್ರ ಸಚಿವರ ಎಚ್ ಡಿ ಕುಮಾರಸ್ವಾಮಿ, ಜೆಡಿಎಸ್ ನಾಯಕರಿಗೆ ಕರೆ ನೀಡಿದ್ದಾರೆ.
ಮತ್ತೊಂದೆಡೆ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಸಮನ್ವಯ ಸಮಿತಿ ರಚನೆ ಮಾಡಬೇಕೆಂಬ ಕೂಗುಗಳು ಸಹ ಕೇಳಿಬರುತ್ತಿವೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಯಡಿಯೂರಪ್ಪ ಯಶವಂತಪುರ ಬಿಜೆಪಿ ಅಭ್ಯರ್ಥಿ ಎಂದು ತಮ್ಮ ಆಪ್ತನ ಹೆಸರು ಘೋಷಣೆ ಮಾಡಿದ್ದು, ಜೆಡಿಎಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದ್ದು, ಇದು ಮುಂದೆ ಯಾವ ಮಟ್ಟಕ್ಕೆ ಹೋಗಿ ನಿಲ್ಲುತ್ತೆ ಎಂದು ಕಾದುನೋಡಬೇಕಿದೆ.
