ಧಾರವಾಡ: ಸಸ್ಯಹಾರಿ ಪದಾರ್ಥಗಳನ್ನು ಆರ್ಡರ್ ಮಾಡಿದ್ದ ಗ್ರಾಹಕನಿಗೆ ಮಾಂಸಾಹಾರ ಪದಾರ್ಥ ನೀಡಿದ ಪ್ರಕರಣದಲ್ಲಿ ಡೋಮಿನೋಸ್ ಪಿಜ್ಜಾ ಡೆಲಿವರಿ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗವು 60 ಸಾವಿರ ರೂ. ದಂಡ ವಿಧಿಸಿದೆ.
ಧಾರವಾಡದ ವಿದ್ಯಾಗಿರಿಯ ನಿವಾಸಿ ಹಾಗೂ ವಿದ್ಯಾರ್ಥಿ ಪ್ರದ್ಯುಮ್ನ ಇನಾಮದಾರ ಎಂಬವರು ಕಂಪನಿಯ ಜಾಹೀರಾತನ್ನು ನೋಡಿ, ಸಸ್ಯಹಾರಿ ಪದಾರ್ಥಗಳಾದ ಇಂಡಿ ತಂದೂರಿ, ಪನ್ನೀರ್ ಪಿಜ್ಜಾ, ಪನ್ನೀರ್ ಟಿಕ್ಕಾ, ಸ್ಟಫ್ಡ್ ಗಾರ್ಲಿಕ್ ಬ್ರೆಡ್, ವೆಜ್ಜಿಂಗಿ ಪಾರ್ಸೆಲ್ ಹಾಗೂ ಚೀಸ್ಡಿಪ್ನ್ನು 555 ರೂ. ಪಾವತಿಸಿ ಆರ್ಡರ್ ಮಾಡಿದ್ದರು. ಅದರಂತೆ, ಡೋಮಿನೋಸ್ ಸಿಬ್ಬಂದಿ ಆಹಾರವನ್ನು ಮನೆಗೆ ತಲುಪಿಸಿದ್ದು, ಅದನ್ನು ಸೇವನೆ ಮಾಡುವಾಗ ಅದು ಸಸ್ಯಹಾರವಲ್ಲ ಮಾಂಸಹಾರಿ ಪದಾರ್ಥ ಎನ್ನುವುದು ತಮಗೆ ಗೊತ್ತಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
ಪಾರ್ಸೆಲ್ ಬಾಕ್ಸ್ನ ಮೇಲೆ ಹಸಿರು ಸ್ಟಿಕ್ಕರ್ ಅಂಟಿಸಿದ್ದು, ಆದರೆ ಅದರಲ್ಲಿ ಮಾಂಸಹಾರಿ ಪದಾರ್ಥ ಕಳುಹಿಸಿದ್ದಾರೆ. ಅದನ್ನು ಸೇವಿಸಿದ್ದರಿಂದ ತನಗೆ ಧರ್ಮ ಭ್ರಷ್ಟ ಮಾಡಿದಂತಾಗಿದೆ. ಅಲ್ಲದೆ, ತಪ್ಪು ಪಾರ್ಸೆಲ್ ಕಳುಹಿಸಿ, ಡೋಮಿನೋಸ್ ಕಂಪನಿಯವರು ಸೇವಾ ನ್ಯೂನತೆ ಎಸಗಿದ್ದಾರೆ. ಹೀಗಾಗಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರದ್ಯುಮ್ನ ಇನಾಮದಾರ, ಜಿಲ್ಲಾ ಗ್ರಾಹಕರ ಆಯೋಗಕ್ಕೆ ಜನವರಿ 1ರಂದು ದೂರು ಸಲ್ಲಿಸಿದ್ದರು.
ಈ ಬಗ್ಗೆ ಕೂಲಂಕಷ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ವಿಶಾಲಾಕ್ಷಿ ಅ. ಬೋಳಶೆಟ್ಟಿ ಅವರು, ದೂರುದಾರ ವಿದ್ಯಾರ್ಥಿಯಾಗಿದ್ದು, ಸಂಪೂರ್ಣ ಸಸ್ಯಹಾರಿಯಾಗಿದ್ದಾರೆ. ಅದೇ ರೀತಿ, ಎದುರುದಾರರ ಸಸ್ಯಹಾರಿ ಆಹಾರ ಪದಾರ್ಥದ ವಿದ್ಯಾಪನೆಗಳನ್ನು ನೋಡಿಯೇ 555 ರೂ. ಪಾವತಿಸಿ, ಆಹಾರ ಪದಾರ್ಥಗಳನ್ನು ಆರ್ಡರ್ ಮಾಡಿದ್ದಾರೆ.
ಬಳಿಕ, ತಮಗೆ ಬಂದಿರುವುದು ಸಸ್ಯಹಾರಿ ಪದಾರ್ಥ ಅಂತಾ ತಿಳಿದು ಅದನ್ನು ಸೇವಿಸಿದ್ದಾರೆ. ಆದರೆ, ಬೇರೆ ರೀತಿಯ ಅನುಭವವಾದ ಹಿನ್ನೆಲೆಯಲ್ಲಿ, ಪದಾರ್ಥವನ್ನು ಸರಿಯಾಗಿ ಪರಿಶೀಲಿಸಿದಾಗ ಅದು ಮಾಂಸಾಹಾರ ಎಂಬುದು ಅವರಿಗೆ ಗೊತ್ತಾಗಿದೆ. ಅಲ್ಲದೆ, ಆಯೋಗವು ದಾಖಲೆಗಳನ್ನು ಪರಿಶೀಲಿಸಿದಾಗ, ಕಂಪನಿಯವರು ಗ್ರಾಹಕ ಆರ್ಡರ್ ಮಾಡಿದ್ದ ಪದಾರ್ಥಗಳನ್ನು ಕಳುಹಿಸದೇ, ತಪ್ಪಾಗಿ ಮಾಂಸಾಹಾರ ಕಳಿಸಿರುವುದು ಗೊತ್ತಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಕರಣದಲ್ಲಿ ಎಲ್ಲ ಅಂಶಗಳನ್ನು ಗಮನಿಸಿದ ಆಯೋಗ, ಡೋಮಿನೋಸ್ ಕಂಪನಿಯವರ ನಿರ್ಲಕ್ಷ್ಯತನದಿಂದ ದೂರುದಾರರು ಮಾಂಸಾಹಾರ ಸೇವಿಸುವ ಪರಿಸ್ಥಿತಿ ಬಂದಿದೆ. ಅಲ್ಲದೆ, ಕಂಪನಿಯವರು ತಾವು ಹೊರಡಿಸಿದ ಜಾಹೀರಾತು, ಶಿಸ್ತಿನ ಆಹಾರ ಪದಾರ್ಥ ಮತ್ತು ಅದರ ವಿತರಣೆಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡದೆ, ಸೇವಾ ನ್ಯೂನತೆ ಎಸಗಿದ್ದಾರೆ.
ಇದರಿಂದ ದೂರುದಾರರಿಗೆ ಆಗಿರುವ ಮಾನಸಿಕ ತೊಂದರೆ ಹಾಗೂ ಅನಾನುಕೂಲಕ್ಕೆ 50,000 ರೂ. ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚವಾಗಿ 10,000 ರೂ. ನೀಡುವಂತೆ ಡಾಮಿನೋಸ್ ಪಿಜ್ಜಾಗೆ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.
