ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಹಣಕಾಸು ವ್ಯವಹಾರ ಹಾಗೂ ಬೃಹತ್ ನಿರ್ಮಾಣ ಯೋಜನೆಗಳ ಕುರಿತು ಜಾರಿ ನಿರ್ದೇಶನಾಲಯದ (ಇಡಿ) ತನಿಖೆಯಲ್ಲಿ ಹಲವು ಮಹತ್ವದ ಸಂಗತಿಗಳು ಬಹಿರಂಗವಾಗಿವೆ.
ಯಾದಗಿರಿ ಜಿಲ್ಲೆಯ ತಮ್ಮ ತವರೂರಿನಲ್ಲಿ ಸುಮಾರು 35ರಿಂದ 40 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಸಂಕೀರ್ಣ ನಿರ್ಮಿಸಲು ಶಿವಶಂಕರಪ್ಪ ಸಾಹುಕಾರ್ ಯೋಜನೆ ರೂಪಿಸಿದ್ದರು ಎಂದು ಇಡಿ ಅಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಸುಮಾರು 8 ಎಕರೆ ಪ್ರದೇಶದಲ್ಲಿ ಶಾಲೆ, ಹಾಸ್ಟೆಲ್, ಆಟದ ಮೈದಾನ, ವಾಣಿಜ್ಯ ಸಂಕೀರ್ಣ ಹಾಗೂ ಸಮಾವೇಶ ಭವನ ಸೇರಿದಂತೆ ಹಲವು ಸೌಲಭ್ಯಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಈ ಯೋಜನೆಗಾಗಿ ವಾಸ್ತುಶಿಲ್ಪದ ವಿನ್ಯಾಸ ಹಾಗೂ ನೀಲನಕ್ಷೆಗಳನ್ನು ಸಿದ್ಧಪಡಿಸಲಾಗಿತ್ತು. ಈ ಜಮೀನು ಸಾಹುಕಾರ್ ಅವರ ಪತ್ನಿಯ ಹೆಸರಿನಲ್ಲಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಅಕ್ರಮ ಹಣ ಹೂಡಿಕೆ ಮಾಡಿದ್ದರೇ?
ಕೆಪಿಎಸ್ಸಿ ನೇಮಕಾತಿ ಅಕ್ರಮದಿಂದ ಸಂಗ್ರಹಿಸಲಾಗಿದೆ ಎನ್ನಲಾದ ಹಣವನ್ನು ಈ ಬೃಹತ್ ಯೋಜನೆಗೆ ಬಳಸಲು ಉದ್ದೇಶಿಸಲಾಗಿತ್ತೇ ಎಂಬ ಅನುಮಾನವನ್ನು ಇಡಿ ವ್ಯಕ್ತಪಡಿಸಿದೆ. ಆರೋಪಿಯ ಹಣಕಾಸು ವ್ಯವಹಾರಗಳು ಹಾಗೂ ಯೋಜನೆಗೆ ಹಣ ಹೊಂದಿಸುವ ಮೂಲದ ಬಗ್ಗೆ ತನಿಖೆ ಮುಂದುವರಿದಿದೆ.
ಸಾಹುಕಾರ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಎಸ್.ಪಿ. ದಯಾನಂದ್ ನಡುವೆ 10 ಕೋಟಿ ರೂಪಾಯಿಗೂ ಅಧಿಕ ಹಣಕಾಸು ವ್ಯವಹಾರ ನಡೆದಿರುವ ಆರೋಪವೂ ತನಿಖೆಯಲ್ಲಿದೆ.
2025ರ ಆಗಸ್ಟ್ನಿಂದ ಡಿಸೆಂಬರ್ವರೆಗೆ ಸುಮಾರು 4.99 ಕೋಟಿ ರೂಪಾಯಿ ವಹಿವಾಟು ನಡೆದಿರುವುದಕ್ಕೆ ಸಂಬಂಧಿಸಿದ ಕೈಬರಹದ ದಾಖಲೆಗಳು ಪತ್ತೆಯಾಗಿವೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ.
ಕೆಪಿಎಸ್ಸಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಮತ್ತು ಇಡಿ ತನಿಖೆ ಮುಂದುವರಿದಿದ್ದು, ಹಣದ ಮೂಲ, ಅಭ್ಯರ್ಥಿಗಳಿಂದ ಪಡೆದಿದ್ದಾರೆ ಎನ್ನಲಾದ ಲಂಚ ಹಾಗೂ ವಿವಿಧ ಹಣಕಾಸು ವ್ಯವಹಾರಗಳ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.
