ಹಾವುಗಳ ಜೊತೆ ಎಷ್ಟು ಜಾಗೃತರಾಗಿದ್ದರೂ ಕಡಿಮೆಯೇ ಅಂತದರಲ್ಲಿ ಉರಗ ರಕ್ಷಕನೊಬ್ಬ ರಕ್ಷಣೆ ಮಾಡಿದ ಹಾವನ್ನು ಕುತ್ತಿಗೆಗೆ ಬಿಗಿದುಕೊಂಡು ಬೈಕ್ ಸವಾರಿ ಮಾಡುವ ವೇಳೆ ಅದೇ ಹಾವಿನಿಂದ ಕಡಿತಕ್ಕೊಳಗಾಗಿ ಜೀವ ಕಳೆದುಕೊಂಡಿದ್ದಾರೆ.
ಅಂದಹಾಗೆ ಈ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿದ್ದು, ಮೃತ ವ್ಯಕ್ತಿಯನ್ನು ದೀಪಕ್ ಮಹಾವರ್ ಎಂದು ಗುರುತಿಸಲಾಗಿದೆ.
ದೀಪಕ್ ಅವರು ಉರಗ ರಕ್ಷಕನಾಗಿದ್ದು ಜೊತೆಗೆ ಜೆಪಿ ಕಾಲೇಜಿನಲ್ಲಿ ತಾತ್ಕಾಲಿಕ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು.
ಉರಗ ರಕ್ಷಕನಾಗಿರುವ ದೀಪಕ್ ಇದುವರೆಗೆ ಸಾವಿರಾರು ವಿಷಕಾರಿ ಹಾವುಗಳನ್ನು ರಕ್ಷಣೆ ಮಾಡಿದ್ದರು ಎನ್ನಲಾಗಿದೆ, ಅದರಂತೆ ರಕ್ಷಣೆ ಮಾಡಿದ್ದ ನಾಗರ ಹಾವೊಂದನ್ನು ದೀಪಕ್ ತನ್ನ ಕುತ್ತಿಗೆಗೆ ಸುತ್ತಿಕೊಂಡು ಸವಾರಿ ಮಾಡಿದ್ದಾರೆ ಈ ವೇಳೆ ಇದನ್ನು ಗಮನಿಸಿದ ಕೆಲ ಯುವಕರು ಅವರನ್ನು ನಿಲ್ಲಿಸಿ ವಿಡಿಯೋ ಕೂಡ ಮಾಡಿದ್ದಾರೆ, ಇದಾದ ಬಳಿಕ ಬೈಕ್ ಏರಿ ಸವಾರಿ ಮಾಡುವ ವೇಳೆ ದೀಪಕ್ ಅವರ ಕೈಗೆ ಹಾವು ಕಚ್ಚಿದೆ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗಿದೆ.
ದೀಪಕ್ ಅವರ ಪತ್ನಿ ಈ ಮೊದಲೇ ನಿಧನಹೊಂದಿದ್ದು ಇದೀಗ ದೀಪಕ್ ಅವರ ನಿಧನದಿಂದ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.
ದೀಪಕ್ ಅವರು ಕುತ್ತಿಗೆಗೆ ಹಾವನ್ನು ಸುತ್ತಿಕೊಂಡು ಅದನ್ನು ಮುದ್ದಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ, ಹಾವುಗಳ ಜೊತೆ ಉರಗ ರಕ್ಷಕ ಜಾಗೃತರಾಗಿದ್ದಿದ್ದರೆ ನಿಜಕ್ಕೂ ಅವರ ಜೀವ ಉಳಿಯುತ್ತಿತ್ತು.
