ಹಾವೇರಿ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮಂಗಳವಾರ (ಜು.08) ನನಗೆ ಭೇಟಿಗೆ ಸಮಯ ಕೊಟ್ಟಿದಾರೆ. ಹೋಗಿ ಭೇಟಿಯಾದ ಮೇಲೆ ಏನೆಂದು ಗೊತ್ತಾಗಲಿದೆ. ಸರ್ಕಾರದ ಸಾಧನೆ, ಸಂಘಟನೆ ಬಗ್ಗೆ ಚರ್ಚೆ ಮಾಡಬಹುದು ಎಂದು ಡೆಪ್ಯೂಟಿ ಸ್ಪೀಕರ್, ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಉಪಾಧ್ಯಕ್ಷರಾದ ಮೇಲೆ ನಾನು ಕೇಳಿದ ಅನುದಾನ ಕೊಟ್ಟಿದ್ದಾರೆ. 100ಕ್ಕೆ 100 ಕೊಡುವುದು ಆ ದೇವರಿಂದಲೂ ಸಾಧ್ಯವಿಲ್ಲ ಎಂದರು.
ನನಗೆ ಸಚಿವ ಸ್ಥಾನ ಕೊಡುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಯಾರಿಗೆ ಕೊಡಬೇಕು, ಏನು ಕೊಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ. ಸಚಿವ ಸ್ಥಾನ ಕೊಟ್ಟರೆ ಯಾರು ಬೇಡ ಅಂತಾರೆ? ಶಾಸಕರಾದವರಿಗೆ ಸಚಿವರಾಗುವ ಆಸೆ ಇರುತ್ತೆ, ಕೊಟ್ಟರೆ ಯಾರೂ ಬೇಡ ಅನ್ನಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮ.
ಸಚಿವ ಸ್ಥಾನ ಕೊಡುವುದಾಗಿ ಸುರ್ಜೇವಾಲಾ ಹಿಂದೆಯೂ ಹೇಳಿದ್ದರು, ನಾಳೆಯೂ ಭೇಟಿಯಾದಾಗ ಸಚಿವ ಸ್ಥಾನ ಕೇಳುತ್ತೇನೆ. ಕೇಳೋಕೆ ಏನು ರೊಕ್ಕ ಕೊಡಬೇಕಾ? ನಮ್ಮ ಡಿಮ್ಯಾಂಡ್ ಇದೆ, ಕೊಡಿ ಎಂದು ಕೇಳುತ್ತೇನೆ ಕೊಡುವುದು ಬಿಡುವುದು ಅವರಿಗೆ ಬಿಟ್ಟಿದ್ದು ಎಂದು ಲಮಾಣಿ ಹೇಳಿದರು.
