ಮೈಸೂರು: ಕನ್ನಡದ ಮೇರುನಟ ಡಾ ರಾಜ್ ಕುಮಾರ್ ಅವರನ್ನು ಚಿತ್ರವೊಂದಕ್ಕೆ ಮೊದಲ ಬಾರಿಗೆ ಹಾಡಿಸುವಂತೆ ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ಅವರಿಗೆ ಹೇಳಿದ್ದು ನಾನೇ ಎಂಬ ವಿಷಯವನ್ನು ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಇಳಯರಾಜ ಹೇಳಿದ್ದಾರೆ.
ಇಳಯರಾಜ ಅವರು ದಸರಾ ಮ್ಯೂಸಿಕಲ್ ನೈಟ್‌ನಲ್ಲಿ ಪ್ರದರ್ಶನ ನೀಡಲು ಬಂದಿದ್ದರು. ಈ ವೇಳೆ ತುಂಬಿದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜಿ ಕೆ ವೆಂಕಟೇಶ್ ಅವರು 1974 ರಲ್ಲಿ ಸಂಪತ್ತಿಗೆ ಸವಾಲ್ ಚಿತ್ರದ ಯಾರೇ ಕೂಗಾಡಲಿ ಹಾಡಲು ಪಿಬಿ ಶ್ರೀನಿವಾಸ್ ಅಥವಾ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಆದ್ಯತೆ ನೀಡಿದ್ದರು. ಆಗ ನಾನು ಯಾರಾದರೂ ಹೊಸಬರಿಗೆ ಈ ಬಾರಿ ಅವಕಾಶ ನೀಡೋಣ, ಇದಕ್ಕೆ ಹೊಸಬರು ಹಾಡಿದರೆ ಒಳ್ಳೆಯದು ಎಂದೆ.
ರಾಜ್ ಕುಮಾರ್ ಅವರೇ ಯಾಕೆ ಹಾಡಬಾರದು ಎಂದೆ. ಆದರೆ ಪಿ ಬಿ ಶ್ರೀನಿವಾಸ್ ಅವರ ಜೀವನದ ಆಧಾರವಾಗಿದ್ದ ಗಾಯನವನ್ನು ಕಸಿದುಕೊಳ್ಳಲು ರಾಜ್ ಕುಮಾರ್ ಅವರಿಗೆ ಇಷ್ಟವಿಲ್ಲದೆ ಆರಂಭದಲ್ಲಿ ಒಪ್ಪಲಿಲ್ಲ, ಕೊನೆಗೆ ನಾನು ಒತ್ತಾಯ ಮಾಡಿದ್ದರಿಂದ ಒಪ್ಪಿಕೊಂಡರು.
ನನ್ನ ಒತ್ತಾಯದ ಮೇರೆಗೆ ರಾಜ್ ಕುಮಾರ್ ಮೊದಲ ಬಾರಿಗೆ 1974 ರಲ್ಲಿ ಸಂಪತ್ತಿಗೆ ಸವಾಲ್ ಚಿತ್ರಕ್ಕೆ ಮೊದಲ ಸಲ ಹಾಡಿದರು. ಮೊದಲ ಹಾಡೇ ಹಿಟ್ ಆಯಿತು. ವಿನಯವಂತ ಗುಣ ಹೊಂದಿದ್ದ ರಾಜ್ ಕುಮಾರ್ ಅವರಿಗೆ ವೃತ್ತಿಯಲ್ಲಿ ಗಾಯಕರಾಗಿದ್ದ ಶ್ರೀನಿವಾಸ್ ಅವರ ಮನಸ್ಸಿಗೆ ನೋವು ಮಾಡುವುದು ಅವರಿಗೆ ಇಷ್ಟವಿರಲಿಲ್ಲ ಎಂದು ನೆನಪಿಸಿಕೊಂಡರು ಇಳಯರಾಜಾ.