ಸಾಗರ: ಸಿಗಂದೂರಿನ ಹೊಳೆಬಾಗಿಲು ಲಾಂಚ್ನ ಸ್ಟೇರಿಂಗ್ ಜಾಮ್ ಆಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಸ್ಟೇರಿಂಗ್ ಜಾಮ್ ಆಗುತ್ತಿದ್ದಂತೆ ಲಾಂಚ್ನಲ್ಲಿದ್ದ ನೂರಾರು ಪ್ರಯಾಣಿಕರಲ್ಲಿ ಆತಂಕ ನಿರ್ಮಾಣ ಆಗಿತ್ತು.
ಮಳೆ ಗಾಳಿಗೆ ಲಾಂಚ್ ದಿಕ್ಕು ತಪ್ಪಿದೆ ಎಂದೇ ದಡದಲ್ಲಿದ್ದ ಪ್ರಯಾಣಿಕರು, ಸ್ಥಳೀಯರು ಅಂದುಕೊಂಡಿದ್ದರು. ಕೊನೆಗೆ ಹತ್ತಿರದಲ್ಲೇ ಇದ್ದ ದಿಲೀಪ್ ಬಿಲ್ಡರ್ಸ್ ಬೋಟಿನಿಂದ ಲಾಂಚನ್ನು ದಡಸೇರಿಸಲಾಗಿದೆ. ಲಾಂಚ್ ಹಾಳಾಗಿದ್ದರೂ ರಿಪೇರಿ ಮಾಡದ ಕಾರಣ ಈ ರೀತಿ ಘಟನೆ ನಡೆದಿದೆ. ಸೇತುವೆ ಉದ್ಘಾಟನೆ ನಿಧಾನವಾದರೂ ಪರವಾಗಿಲ್ಲ ಓಡಾಟಕ್ಕೆ ಅವಕಾಶ ಕೊಡಿ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ನೂರಕ್ಕೂ ಹೆಚ್ಚು ಜನರು, ಪೂರ್ಣ ಪ್ರಮಾಣದ ಇತರ ವಾಹನಗಳನ್ನು ಹೊತ್ತಿದ್ದ ಲಾಂಚ್ನಲ್ಲಿ ಈ ದೋಷ ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಯಿತು.
ಹೊಳೆಬಾಗಿಲು ಲಾಂಚಿನಿಂದ ತಿಂಗಳಿಗೆ ಸುಮಾರು ನಲವತ್ತು ಲಕ್ಷಕ್ಕೂ ಅಧಿಕ ವರಮಾನ ಜಲಾನಯನ ಇಲಾಖೆಗೆ ಬರುತ್ತಿದ್ದರೂ ಇವುಗಳ ದುರಸ್ಥಿ ಹಾಗೂ ಸರಿಯಾದ ನಿರ್ವಹಣೆ ಇಲ್ಲದಿರುವುದೇ ಇದಕ್ಕೆಲ್ಲ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಸ್ಟೇರಿಂಗ್ ಹಾಳಾಗಿ ಒಂದು ವಾರ ಕಳೆಯುತ್ತಾ ಬಂದರೂ ಸರಿಯಾದ ರಿಪೇರಿ ಕಾರ್ಯ ಮಾಡಿರಲಿಲ್ಲ. ಈ ಲಾಂಚುಗಳಲ್ಲಿ ಅರೆಕಾಲಿಕ ನೌಕರರೇ ಹೆಚ್ಚು ಇದ್ದು ಅವರ ವೇತನ ಪಾವತಿಯಾಗದೆ ಸುಮಾರು ಆರು ತಿಂಗಳ ವೇತನ ಬಾಕಿ ಇದ್ದು ಸಂಬಳ ಇಲ್ಲದೆ ದುಡಿಯುವವರ ಆಲಸ್ಯವೂ ಇದಕ್ಕೆ ಇನ್ನೊಂದು ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.
