ಶಿವಮೊಗ್ಗ: ಹೆಲ್ಮೆಟ್ ಧರಿಸದ ಹಿನ್ನೆಲೆಯಲ್ಲಿ ಪೊಲೀಸರು ತಡೆದ ವಿಚಾರವೇ ಗಾಂಧಿ ಬಜಾರ್ನಲ್ಲಿ ಗಲಾಟೆಗೆ ಕಾರಣವಾದ ಘಟನೆ ನಡೆದಿದೆ. ಸಂಚಾರಿ ನಿಯಮ ಪಾಲನೆ ಕುರಿತು ತಿಳಿಸಿದ ಪೊಲೀಸರ ಮೇಲೆಯೇ ಇಬ್ಬರು ಯುವಕರು ದೌರ್ಜನ್ಯ ನಡೆಸಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಾಗಿದೆ.
ಸೋಮವಾರ ಬೆಳಿಗ್ಗೆ ಗಾಂಧಿ ಬಜಾರ್ನಲ್ಲಿ ಸಂಚಾರ ನಿಯಂತ್ರಣದಲ್ಲಿ ತೊಡಗಿದ್ದ ಎಎಸ್ಐ ಮಂಜುನಾಥ್ ಹಾಗೂ ಸಿಪಿಸಿ ಸಂತೋಷ್, ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸಯ್ಯದ್ ಮುಜಾಮಿಲ್ ಅವರನ್ನು ತಡೆದು ಎಚ್ಚರಿಕೆ ನೀಡಿದರು. ಆದರೆ, ಇದರಿಂದ ಆಕ್ರೋಶಗೊಂಡ ಮುಜಾಮಿಲ್ ಅಧಿಕಾರಿಗಳೊಂದಿಗೆ ವಾಗ್ವಾದ ಆರಂಭಿಸಿದ್ದಾನೆ.
ಈ ವೇಳೆ ಸ್ಥಳಕ್ಕಾಗಮಿಸಿದ ಜಬಿವುಲ್ಲಾ ಕೂಡ ಸೇರಿಕೊಂಡು, ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿ, “ನಾವು ಹೆಲ್ಮೆಟ್ ಹಾಕೋದಿಲ್ಲ, ನೀವು ಏನು ಮಾಡ್ತೀರಾ?” ಎಂದು ಸವಾಲು ಹಾಕಿದ್ದಾನೆ. ಮಾತಿನ ಚಕಮಕಿಯೇ ದೌರ್ಜನ್ಯಕ್ಕೆ ತಿರುಗಿ, ಇಬ್ಬರೂ ಸೇರಿ ಪೊಲೀಸರನ್ನು ತಳ್ಳಾಡಿಸಿ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ.
ಘಟನೆಯ ಬಳಿಕ ಬೈಕ್ ಕೀ ಕಿತ್ತುಕೊಂಡು ಬೆದರಿಕೆ ಹಾಕಿ ಪರಾರಿಯಾಗಲು ಯತ್ನಿಸಿದ ಆರೋಪಿಗಳನ್ನು ಕೋಟೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
