Trending

ರೇಣುಕಾಚಾರ್ಯ ಕಾಂಗ್ರೆಸ್‌ ಪರ ಕೆಲಸ ಮಾಡಿದ ದಾಖಲೆಯಿದೆ : ಶಿವಗಂಗಾ ಆರೋಪ

Spread the love

ದಾವಣಗೆರೆ: ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮುಖಂಡ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹಣ ಪಡೆದು ಕಾಂಗ್ರೆಸ್ ಪರ ಕೆಲಸ ಮಾಡಿದ್ದಾರೆ. ರೇಣುಕಾಚಾರ್ಯ ಎಷ್ಟು ಕೋಟಿ ತೆಗೆದುಕೊಂಡಿದ್ದಾರೆ, ಎಲ್ಲಿ ಹಾಗೂ ಯಾವಾಗ ತೆಗೆದುಕೊಂಡಿದ್ದಾರೆಂಬ ಬಗ್ಗೆ ನನ್ನ ಬಳಿ ಸಾಕ್ಷ್ಯ, ದಾಖಲೆಗಳಿವೆ ಎಂದು ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ ಆರೋಪಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಣೆಯಾದ ಬಳಿಕ ರೇಣುಕಾಚಾರ್ಯ ಅವರು ಕಾಂಗ್ರೆಸ್‌ ಬೆಂಬಲಿಸಲು ನಿರ್ಧರಿಸಿದ್ದರು. ಬಿಜೆಪಿ ಟಿಕೆಟ್ ತಮ್ಮವರಿಗೆ ಕೈ ತಪ್ಪಿದ್ದಕ್ಕೆ ಪಕ್ಷ ನಿಷ್ಠೆ ಮರೆತು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ದಾಖಲೆಗಳಿವೆ. ಸಮಯ ಬಂದಾಗ ಬಹಿರಂಗಪಡಿಸುವೆ ಎಂದರು.

ರೇಣುಕಾಚಾರ್ಯ ಅವರು ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಬಿಜೆಪಿ ಬಿಟ್ಟು ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲು ಮುಂದಾಗಿದ್ದರು. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷರೂ ಅಗಿರುವ ಡಿ.ಕೆ. ಶಿವಕುಮಾರ್ ಭೇಟಿ ಮಾಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ಮನೆ ಬಾಗಿಲಿಗೂ ಬಂದಿದ್ದರು. ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಬಳಿಕ ನಿರ್ಧಾರ ಬದಲಿಸಿದರು ಎಂದು ಆರೋಪ ಮಾಡಿದರು.

ರೇಣುಕಾಚಾರ್ಯ ಅವರು ನಾನು ಇಸ್ಟಿಟ್ ಕ್ಲಬ್ ನಡೆಸುತ್ತೇನೆ. ಕ್ಯಾಶಿನೋ ನಡೆಸುತ್ತೇನೆ, ಐಪಿಎಲ್ ಬೆಟ್ಟಿಂಗ್ ನಡೆಸುತ್ತೇನೆ ಎಂದೆಲ್ಲ ಆರೋಪ ಮಾಡಿದ್ದಾರೆ. ಇವೆಲ್ಲವೂ ಸುಳ್ಳು. ಇದರ ಬಗ್ಗೆ ಅವರು ಒಂದೇ ಒಂದು ಸಾಕ್ಷ್ಯ ಇದ್ದರೂ ತೋರಿಸಲಿ.‌ ನಾನು ಅವರ ಮನೆ ಬಾಗಿಲಿಗೆ ಹೋಗಿ ನಿಲ್ಲಲು ಸಿದ್ಧ. ನಾನು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದು ಸವಾಲೆಸೆದರು.

ನಾನು‌‌ ಮರಳು ದಂಧೆ ನಡೆಸುತ್ತೇನೆಂದು ಹೇಳಿದ್ದಾರೆ. ಆದರೆ, ನಾನು ಅಧಿಕೃತವಾಗಿ ಮರಳು ‌ವ್ಯಾಪಾರ ಮಾಡುತ್ತೇನೆ. ನನ್ನ ಬಗ್ಗೆ ವೈಯಕ್ತಿಕವಾಗಿ ಆರೋಪ ಮಾಡಿದರೆ ಸುಮ್ಮನಿರುವುದಿಲ್ಲ. ವೈಯಕ್ತಿಕವಾಗಿ ಆರೋಪ ಮುಂದುವರಿಸಿದರೆ ರೇಣುಕಾಚಾರ್ಯ ನನ್ನ ಪಾಲುದಾರರ ಮೂಲಕ‌ ಎಲ್ಲೆಲ್ಲಿ‌ ಮರಳು ತರಿಸಿಕೊಂಡಿದ್ದಾರೆ, ಭದ್ರಾವತಿಯಲ್ಲಿ ಯಾರ ಮನೆಗೆ ಮರಳು ತರಿಸಿಕೊಂಡಿದ್ದಾರೆ ಎಂಬುದನ್ನು ನಾನು ಬಹಿರಂಗ ಪಡಿಸುತ್ತೇನೆ. ನನ್ನ ಬಗ್ಗೆ ರಾಜಕೀಯವಾಗಿ ಆರೋಪ‌ ಮಾಡಲಿ. ಆದರೆ, ವ್ಯಕ್ತಿಗತವಾಗಿ ಮಾತನಾಡಿದರೆ ಹುಷಾರ್ ಎಂದು ಎಚ್ಚರಿಕೆ ನೀಡಿದರು.

[pj-news-ticker]