ಮುಂಬೈ: ಬಾಲಿವುಡ್ ನಟ ಮುಕುಲ್ ದೇವ್ ಶುಕ್ರವಾರ ತಡರಾತ್ರಿ ನಿಧನಾರಾಗಿದ್ದಾರೆ. ಕೆಲವು ದಿನಗಳಿಂದ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿತ್ತು. ಹಾಗಾಗಿ ಅವರನ್ನು ಐಸಿಯುನಲ್ಲಿ ಇರಿಸಲಾಗಿತ್ತು.
ಹಿಂದಿ, ಪಂಜಾಬಿ ಮತ್ತು ದಕ್ಷಿಣ ಭಾರತೀಯ ಚಲನಚಿತ್ರಗಳು ಹಾಗೂ ದೂರದರ್ಶನದಲ್ಲಿ ಇವರು ಅಭಿನಯಿಸಿದ್ದರು. ಮುಕುಲ್ ದೇವ್ ಅವರಿಗೆ 54 ವರ್ಷ ವಯಸ್ಸಾಗಿತ್ತು. ಮುಕುಲ್ ಅವರ ಸಾವಿನ ಸುದ್ದಿಯನ್ನು ಅವರ ಸಹೋದರ ರಾಹುಲ್ ದೇವ್ ಖಚಿತ ಪಡಿಸಿದ್ದಾರೆ. ಆದರೆ ನಿಧನದ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.
ಮುಕುಲ್ ದೇವ್ ನವದೆಹಲಿಯಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದರು, ಜಲಂಧರ್ ಬಳಿಯ ಹಳ್ಳಿ ಇವರ ಮೂಲ. ಅವರ ತಂದೆ ಹರಿ ದೇವ್, ಸಹಾಯಕ ಪೊಲೀಸ್ ಆಯುಕ್ತರಾಗಿದ್ದರು ಮತ್ತು ಅವರಿಗೆ ಅಫಘಾನ್ ಸಂಸ್ಕೃತಿಯನ್ನು ಪರಿಚಯಿಸಿದವರು. ಅವರ ತಂದೆ ಪಾಷ್ಟೋ ಮತ್ತು ಪರ್ಷಿಯನ್ ಭಾಷೆಗಳನ್ನು ಮಾತನಾಡಬಲ್ಲರು.
ಈ ನಟ ಇಂದಿರಾ ಗಾಂಧಿ ರಾಷ್ಟ್ರೀಯ ಉರಾನ್ ಅಕಾಡೆಮಿಯಿಂದ ತರಬೇತಿ ಪಡೆದ ಪೈಲಟ್ ಕೂಡ ಆಗಿದ್ದರು. ದಸ್ತಕ್ (1996) ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದರು. ಅದರಲ್ಲಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಕೂಡ ಅಭಿನಯಿಸಿದ್ದರು.
ನಂತರ ಮುಕುಲ್ ಯಮ್ಲಾ ಪಗ್ಲಾ ದೀವಾನಾ , ಸನ್ ಆಫ್ ಸರ್ದಾರ್ , ಆರ್… ರಾಜ್ಕುಮಾರ್ , ಮತ್ತು ಜೈ ಹೋ ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
