2025 ರ ಐಪಿಎಲ್ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇದೀಗ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಗಾಯದ ಕಾರಣದಿಂದಾಗಿ ಇಡೀ ಟೂರ್ನಿಯಿಂದ ಹೊರಬಿದಿದ್ದಾರೆ.
ಬ್ಯಾಟಿಂಗ್ ಮಾಡುವಾಗ ರುತುರಾಜ್ ಮೊಣಕೈಗೆ ಗಾಯವಾಗಿತ್ತು. ವರದಿಯ ಪ್ರಕಾರ, ರುತುರಾಜ್ ಅವರ ಮೊಣಕೈಯಲ್ಲಿ ಮೂಳೆ ಮುರಿತ ಉಂಟಾಗಿದ್ದು, ಈ ಕಾರಣದಿಂದಾಗಿ ಅವರು ಮುಂಬರುವ ಪಂದ್ಯಗಳಲ್ಲಿ ಆಡುವುದು ಸಾಧ್ಯವಾಗುವುದಿಲ್ಲ. ರುತುರಾಜ್ ಅವರ ಅನುಪಸ್ಥಿತಿಯಲ್ಲಿ, ಎಂಎಸ್ ಧೋನಿ ಈಗ ಸಿಎಸ್‌ಕೆ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ನಾಯಕ ರುತುರಾಜ್ ಗಾಯಕ್ವಾಡ್ ಇಂಜುರಿಯಿಂದ ಇಡೀ ಟೂರ್ನಿಯಿಂದ ಹೊರಬಿದ್ದಿರುವ ವಿಚಾರವನ್ನು ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ದೃಢಪಡಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು,‘ನಾಯಕ ರುತುರಾಜ್ ಗಾಯಕ್ವಾಡ್ ಮೊಣಕೈ ಗಾಯದಿಂದಾಗಿ ಇಡೀ ಸೀಸನ್ನಿಂದ ಹೊರಗುಳಿದಿದ್ದಾರೆ. ಹೀಗಾಗಿ ರುತುರಾಜ್ ಬದಲಿಗೆ ಧೋನಿ ಈಗ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
ಕೆಕೆಆರ್ ವಿರುದ್ಧ ಮುಂದಿನ ಪಂದ್ಯ
ಸ್ಟೀಫನ್ ಫ್ಲೆಮಿಂಗ್ ಹೇಳಿಕೊಂಡಿರುವ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಂದಿನ ಪಂದ್ಯದಲ್ಲಿ ಧೋನಿ ತಂಡವನ್ನು ಮುನ್ನಡೆಸುವುದನ್ನು ಕಾಣಬಹುದಾಗಿದೆ. ಆ ಪ್ರಕಾರ ಸಿಎಸ್‌ಕೆ ತನ್ನ ಮುಂದಿನ ಪಂದ್ಯವನ್ನು ತನ್ನ ತವರು ನೆಲದಲ್ಲಿ ನಾಳೆ ಅಂದರೆ ಏಪ್ರಿಲ್ 11 ರಂದು ಎಂಎ ಚಿದಂಬರಂ ಮೈದಾನದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಧೋನಿ ಮತ್ತೊಮ್ಮೆ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
