ಬೆಂಗಳೂರು: ಡೀಸೆಲ್ ದರ ಹಾಗೂ ಟೋಲ್ ಶುಲ್ಕ ಏರಿಕೆ ವಿರೋಧಿಸಿ ಇದೇ ತಿಂಗಳ 14ರ ಮಧ್ಯರಾತ್ರಿಯಿಂದ ಅನಿರ್ಧಿಷ್ಟ ಕಾಲ ಲಾರಿ ಮಾಲೀಕರು ಮುಷ್ಕರ ನಡೆಸಲಿದ್ದಾರೆ. ಡೀಸೆಲ್ ಏರಿಕೆ ವಾಪಸ್ ಪಡೆಯುವಂತೆ ನೀಡಿದ್ದ ಗಡುವು ಅಂತ್ಯಗೊಂಡಿದ್ದರಿಂದ ಈ ಮುಷ್ಕರ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ.
ಲಾರಿ ಮಾಲೀಕರ ಸಂಘದ ಸಭೆಯ ನಂತರ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಷ್ಕರ ಸಂದರ್ಭದಲ್ಲಿ 5 ರಿಂದ 6 ಲಕ್ಷ ಲಾರಿಗಳು ಸಂಚಾರ ಸ್ಥಗಿತಗೊಳಿಸಲಿವೆ. ಗೂಡ್ಸ್ ವಾಹನಗಳು ಸಹ ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ ಎಂದು ಅವರು ತಿಳಿಸಿದ್ದಾರೆ.
