Trending

ಪತ್ನಿಯೊಂದಿಗೆ ಅನೈತಿಕ ಸಂಬಂಧ ಆರೋಪ : ಯೋಗ ಶಿಕ್ಷಕನ ಸಜೀವ ಸಮಾಧಿ ಮಾಡಿಸಿದ ಪತಿ!

Spread the love

ಹರಿಯಾಣ : ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆಂದು ಆರೋಪಿಸಿ ವ್ಯಕ್ತಿಯೊಬ್ಬ ಚರ್ಕಿ ದಾದ್ರಿಯಲ್ಲಿ ಯೋಗ ಶಿಕ್ಷಕನನ್ನ ಜೀವಂತವಾಗಿ ಸಮಾಧಿ ಮಾಡಿದ ಘಟನೆ ನಡೆದಿದೆ.

ರೋಹ್ಟಕ್‌ನ ಖಾಸಗಿ ವಿವಿಯೊಂದರಲ್ಲಿ ಯೋಗ ಶಿಕ್ಷಕನಾಗಿರುವ ಜಗದೀಪ್ ನನ್ನು ಅಪಹರಿಸಿ ಏಳು ಅಡಿ ಆಳದ ಗುಂಡಿಯಲ್ಲಿ ಜೀವಂತವಾಗಿ ಹೂಳಲಾಗಿತ್ತು.

ಕೃತ್ಯ ನಡೆದ ಮೂರು ತಿಂಗಳ ನಂತರ ಮಾರ್ಚ್ 24 ರಂದು ಪೊಲೀಸರು ಶವವನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಡಿಸೆಂಬರ್ 24 ರಂದು ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಜಗದೀಪ್ ಅವರನ್ನು ಅಪಹರಿಸಲಾಯಿತು. ಆರೋಪಿಗಳು ಕೈಕಾಲುಗಳನ್ನು ಕಟ್ಟಿ, ಬೊಬ್ಬೆ ಹಾಕದಂತೆ ಬಾಯಿಗೆ ಟೇಪ್ ಸುತ್ತಿ ನಿರ್ಜನವಾದ ಹೊಲಕ್ಕೆ ಕರೆದೊಯ್ದರು, ಅಲ್ಲಿ ಆಳವಾದ ಗುಂಡಿ ತೋಡಿಸಿದ್ದರು. ಕಾರ್ಮಿಕನಿಗೆ ಬೋರ್‌ವೆಲ್‌ಗಾಗಿ ಎಂದು ಹೇಳಿದ್ದರು. ಬಳಿಕ ಜಗದೀಪ್ ಅವರನ್ನು ಗುಂಡಿಯಲ್ಲಿ ಜೀವಂತವಾಗಿ ಹೂತು ಹಾಕಿದ್ದರು.

ಅಪಹರಣದ 10 ದಿನಗಳ ನಂತರ ಫೆಬ್ರವರಿ 3 ರಂದು ನಾಪತ್ತೆ ಪ್ರಕರಣ ದಾಖಲಾಗಿತ್ತು. ಪೊಲೀಸರು ಮೂರು ತಿಂಗಳ ಕಾಲ ತನಿಖೆ ನಡೆಸಿ ಪ್ರಕರಣ ಬಯಲಿಗೆಳೆದಿದ್ದಾರೆ.

ಜಗದೀಪ್ ಅವರ ಕರೆ ದಾಖಲೆಗಳು ಪ್ರಕರಣದಲ್ಲಿ ನಿರ್ಣಾಯಕ ಸುಳಿವು ನೀಡಿದ್ದು, ಅಂತಿಮವಾಗಿ ಪೊಲೀಸರು ಧರ್ಮಪಾಲ್ ಮತ್ತು ಹರ್ದೀಪ್ ಎಂಬ ಇಬ್ಬರು ಶಂಕಿತರನ್ನು ಬಂಧಿಸಲು ನೆರವಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಕುಲದೀಪ್ ತಿಳಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ, ಆರೋಪಿಗಳು ಹತ್ಯೆಯ ಭಯಾನಕ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ತಪ್ಪೊಪ್ಪಿಗೆಯ ಪ್ರಕಾರ, ಜಗದೀಪ್ ಬಾಡಿಗೆ ಕಟ್ಟಡದಲ್ಲಿ ವಾಸಿಸುತ್ತಿದ್ದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಎಂದು ಆರೋಪಿಸಲಾಗಿದೆ. ಈ ಸಂಬಂಧವೇ ಮಹಿಳೆಯ ಪತಿ ಕೊಲೆ ಮಾಡಲು ಕಾರಣವಾಯಿತು.

[pj-news-ticker]