ನವದೆಹಲಿ : ಮಧ್ಯಮ ವರ್ಗದವರು, ವೇತನ ವರ್ಗದವರು ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಕೇಂದ್ರ ಸರ್ಕಾರ ಹೆಚ್ಚಿಸಬಹುದು ಎಂಬ ನಿರೀಕ್ಷೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿಜವಾಗಿಸಿದ್ದಾರೆ. 12 ಲಕ್ಷ ರೂ. ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಪಡೆಯುವ ಅವಕಾಶವನ್ನು ಅವರು 2025ರ ಬಜೆಟ್ನಲ್ಲಿ ಒದಗಿಸಿಕೊಟ್ಟಿದ್ದಾರೆ.
ಇಷ್ಟೇ ಅಲ್ಲದೆ, ಆದಾಯ ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸಿ ಹೊಸ ಕಾನೂನು ರೂಪಿಸುವ ಘೋಷಣೆಯನ್ನೂ ಮಾಡಿದ್ದಾರೆ. ಮುಂದಿನ ವಾರ ಹೊಸ ಮಸೂದೆ ಮಂಡನೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದೀಗ 12 ಲಕ್ಷ ರೂಪಾಯಿ ವರೆಗಿನ ಆದಾಯವನ್ನು ಈಗ ತೆರಿಗೆ ಮುಕ್ತಗೊಳಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿರುವುದರಿಂದ ಎಷ್ಟು ವೇತನ ಇದ್ದವರಿಗೆ ಎಷ್ಟು ತೆರಿಗೆ ವಿನಾಯಿತಿ ದೊರೆಯಲಿದೆ ಎಂಬ ವಿವರ ಇಲ್ಲಿದೆ.
ನಿಮಗೆ ಇಷ್ಟು ವೇತನ ಇದ್ದರೆ ತೆರಿಗೆ ಇಲ್ಲ!
ಈ ಹಿಂದಿನ ತೆರಿಗೆ ವ್ಯವಸ್ಥೆಯಲ್ಲಿ 10 ಲಕ್ಷ ರೂ. ವರೆಗೆ ಆದಾಯ ಇರುವವರಿಗೆ 50,000 ರೂ. ತೆರಿಗೆ ವಿಧಿಸಲಾಗುತ್ತಿತ್ತು. ಈಗ ಘೋಷಣೆ ಮಾಡಿರುವ ಪ್ರಕಾರ, 10 ಲಕ್ಷ ರೂ, ವರೆಗೆ ಆದಾಯಕ್ಕೆ ತೆರಿಗೆ ಇಲ್ಲ. ಇದರಿಂದ ವೇತನ ವರ್ಗಕ್ಕೆ 50 ಸಾವಿರ ರೂಪಾಯಿ ಲಾಭ ಆದಂತಾಯಿತು.
12 ಲಕ್ಷ ರೂಪಾಯಿ ವರೆಗಿನ ಆದಾಯಕ್ಕೆ ಈ ಹಿಂದೆ 80,000 ರೂ. ತೆರಿಗೆ ವಿಧಿಸಲಾಗುತ್ತಿತ್ತು. ಈಗ ಶೂನ್ಯ ತೆರಿಗೆ ಇದೆ. ಹೀಗಾಗಿ ವೇತನ ವರ್ಗಕ್ಕೆ 80,000 ರೂ. ಉಳಿತಾಯವಾಗಲಿದೆ.
ತೆರಿಗೆ ಪಾವತಿಯಲ್ಲಿ ಎಷ್ಟು ಉಳಿತಾಯವಾಯ್ತು? ಇಲ್ಲಿದೆ ಲೆಕ್ಕಾಚಾರ
15 ಲಕ್ಷ ರೂಪಾಯಿ ವರೆಗಿನ ಆದಾಯಕ್ಕೆ ಇಂದಿನ ತೆರಿಗೆ ಪದ್ಧತಿಯಲ್ಲಿ 1.40 ಲಕ್ಷ ರೂ. ತೆರಿಗೆ ವಿಧಿಸಲಾಗುತ್ತಿತ್ತು. ಈಗ ಅದು 45,000 ರೂ. ಆಗಿರಲಿದ್ದು 95,000 ರೂ. ಉಳಿತಾಯವಾಗಲಿದೆ.
20 ಲಕ್ಷ ರೂ. ವರೆಗಿನ ಆದಾಯಕ್ಕೆ ಹಿಂದಿನ ತೆರಿಗೆ ಪದ್ಧತಿಯಲ್ಲಿ 2.90 ಲಕ್ಷ ತೆರಿಗೆ ವಿಧಿಸಲಾಗುತ್ತಿತ್ತು. ಈಗ 1.40 ಲಕ್ಷ ತೆರಿಗೆ ವಿಧಿಸಲಾಗುತ್ತದೆ. ಇದರಿಂದ 1.50 ಲಕ್ಷ ರೂ. ಉಳಿತಾಯವಾಗಲಿದೆ.
| ಆದಾಯ ತೆರಿಗೆ (ಹೊಸ ವ್ಯವಸ್ಥೆ) | ಹಿಂದಿದ್ದ ತೆರಿಗೆ | ಈಗಿನ ತೆರಿಗೆ | ಲಾಭ |
| 10 ಲಕ್ಷ ರೂ. | 50,000 ರೂ. | 0 | 50,000 ರೂ. |
| 12 ಲಕ್ಷ ರೂ. | 80,000 ರೂ. | 0 | 80,000 ರೂ. |
| 15 ಲಕ್ಷ ರೂ. | 1.40 ಲಕ್ಷ ರೂ. | 45,000 ರೂ. | 95,000 ರೂ. |
| 20 ಲಕ್ಷ ರೂ. | 2.90 ಲಕ್ಷ ರೂ. | 1.40 ಲಕ್ಷ ರೂ. | 1.50 ಲಕ್ಷ ರೂ. |
| 24 ಲಕ್ಷ ರೂ. | 4.10 ಲಕ್ಷ ರೂ. | 2.40 ಲಕ್ಷ ರೂ. | 1.70 ಲಕ್ಷ ರೂ. |
| 30 ಲಕ್ಷ ರೂ. | 5.90 ಲಕ್ಷ ರೂ. | 4.20 ಲಕ್ಷ ರೂ. | 1.70 ಲಕ್ಷ ರೂ. |
| 50 ಲಕ್ಷ ರೂ. | 11.90 ಲಕ್ಷ ರೂ. | 10.20 ಲಕ್ಷ ರೂ. | 1.70 ಲಕ್ಷ ರೂ. |
24 ಲಕ್ಷ ರೂ. ವರೆಗಿನ ಆದಾಯಕ್ಕೆ ಹಿಂದಿನ ತೆರಿಗೆ ಪದ್ಧತಿಯಲ್ಲಿ 4.10 ಲಕ್ಷ ರೂ. ತೆರಿಗೆ ವಿಧಿಸಲಾಗುತ್ತಿದ್ದರೆ ಈಗ ಹೊಸ ವ್ಯವಸ್ಥೆಯಲ್ಲಿ 2.40 ಲಕ್ಷ ರೂ. ತೆರಿಗೆ ವಿಧಿಸಲಾಗುತ್ತದೆ. ಇದರಿಂದ ವೇತನ ವರ್ಗಕ್ಕೆ 1.70 ಲಕ್ಷ ರೂ. ಉಳಿತಾಯವಾಗಲಿದೆ.
30 ಲಕ್ಷ ರೂ. ವರೆಗಿನ ಆದಾಯಕ್ಕೆ ಹಿಂದಿನ ತೆರಿಗೆ ಪದ್ಧತಿಯಲ್ಲಿ 5.90 ಲಕ್ಷ ರೂ. ತೆರಿಗೆ ವಿಧಿಸಲಾಗುತ್ತಿದ್ದರೆ ಈಗ 4.20 ಲಕ್ಷ ರೂ. ವಿಧಿಸಲಾಗುತ್ತದೆ. ಇದರಿಂದ 1.70 ಲಕ್ಷ ರೂ. ಉಳಿತಾಯವಾಗಲಿದೆ.
50 ಲಕ್ಷ ರೂ. ವರೆಗಿನ ಆದಾಯಕ್ಕೆ ಹಿಂದಿನ ತೆರಿಗೆ ಪದ್ಧತಿಯಲ್ಲಿ 11.90 ಲಕ್ಷ ರೂ. ತೆರಿಗೆ ವಿಧಿಸಲಾಗುತ್ತಿತ್ತು. ಈಗ 10.20 ಲಕ್ಷ ರೂ.ಗೆ ತೆರಿಗೆ ಇಳಿಕೆ ಮಾಡಲಾಗಿದೆ. ಇದರಿಂದ 1.70 ಲಕ್ಷ ರೂ. ಲಾಭವಾಗಲಿದೆ.
