ಪ್ಯಾರಿಸ್ : ಇಲ್ಲಿ ಶುಕ್ರವಾರ ನಡೆದ ಪುರುಷರ ಹಾಕಿ ಪೂಲ್ ಬಿ ಪಂದ್ಯದಲ್ಲಿ ಭಾರತ ತಂಡವು 3-2 ಗೋಲುಗಳಿಂದ ಪ್ರಬಲ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದೆ.
ಒಲಿಂಪಿಕ್ಸ್ ಪುರುಷರ ಹಾಕಿಯಲ್ಲಿ 52 ವರ್ಷಗಳ ಬಳಿಕ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಮೊದಲ ಐತಿಹಾಸಿಕ ಸಾಧನೆ ಮಾಡಿದೆ. ಈ ಹಿಂದೆ 1972ರ ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಆ ಬಳಿಕ ಸೋಲುಗಳನ್ನೇ ಕಂಡಿದ್ದ ಭಾರತ ಈಗ ಗೆದ್ದು ಪದಕದ ನಿರೀಕ್ಷೆ ಹೆಚ್ಚಾಗಿಸಿದೆ.
ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ 2 ಗೋಲು ಗಳಿಸಿದರೆ, ಅಭಿಷೇಕ್ ಒಂದು ಗೋಲು ಬಾರಿಸಿದರು. ಆಸ್ಟ್ರೇಲಿಯಾ ಪರ ಥಾಮಸ್ ಕ್ರೇಗ್ ಮತ್ತು ಬ್ಲೇಕ್ ಗೋವರ್ಸ್ ಗೋಲು ಗಳಿಸಿದರು.
ಈಗಾಗಲೇ ಕ್ವಾರ್ಟರ್ ಫೈನಲ್ಸ್ ತಲುಪಿರುವ ಭಾರತ ಈ ಗೆಲುವಿನೊಂದಿಗೆ 10 ಅಂಕಗಳೊಂದಿಗೆ ಬಿ ಪೂಲ್‌ನಲ್ಲಿ ಎರಡನೇ ಸ್ಥಾನಕ್ಕೆ ಏರಿದೆ. ಬೆಲ್ಜಿಯಂ ಪೂಲ್‌ನಲ್ಲಿ ಅಗ್ರಸ್ಥಾನದಲ್ಲಿದ್ದರೆ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ. ಭಾರತ ನ್ಯೂಜಿ ಲ್ಯಾಂಡ್ ವಿರುದ್ಧ ಜಯದೊಂದಿಗೆ ಅಭಿಯಾನವನ್ನು ಪ್ರಾರಂಭಿಸಿತ್ತು, ಅರ್ಜೆಂಟೀನಾ ವಿರುದ್ಧ ಡ್ರಾ ಮತ್ತು ನಂತರ ಐರ್ಲೆಂಡ್ ಅನ್ನು ಸೋಲಿಸಿತ್ತು.