Trending

ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಸಾಲಗಾರರ ಹಿತ ಕಾಪಾಡಲು ಶೀಘ್ರ ಕಾನೂನು ರಚನೆ : ಸಿಎಂ

Spread the love

ಬೆಂಗಳೂರು: ”ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಲೇವಾದೇವಿದಾರರ ಕಿರುಕುಳದಿಂದ ಸಾಲಗಾರರ ಹಿತ ಕಾಪಾಡಲು ಶೀಘ್ರದಲ್ಲೇ ಕಾನೂನು ರೂಪಿಸಲಾಗುವುದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಗೃಹಕಚೇರಿ ಕೃಷ್ಣಾದಲ್ಲಿ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ”ಮೈಕ್ರೋ ಫೈನಾನ್ಸ್​​ಗಳಿಂದ ಸಾಲ ಪಡೆಯುವವರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ. ಸಾಲಗಾರರಿಗೆ ಕಿರುಕುಳ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ‌ ಕೈಗೊಳ್ಳಲಾಗುವುದು. ಆದಷ್ಟು ಬೇಗನೆ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು ಜಾರಿ ಮಾಡಲಾಗುವುದು” ಎಂದು ಭರವಸೆ ನೀಡಿದರು.

”ಬಲವಂತದ ಸಾಲ ವಸೂಲಾತಿ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ, ಈ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಸಾಧ್ಯವಾಗುವಂತೆ ಕಾನೂನಿನಲ್ಲಿ ಅವಕಾಶ ಇರಲಿದೆ. ಈಗಿರುವ ಕಾನೂನು ಇನ್ನಷ್ಟು ಬಲಪಡಿಸಲು ಕ್ರಮವಹಿಸಲಾಗುತ್ತದೆ. ಇದರಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಲಾಗುತ್ತದೆ. ನೋಂದಣಿಯಾಗದ ಲೇವಾದೇವಿಗಾರರ ಮೇಲೆ ನಿಯಂತ್ರಣಕ್ಕೆ ಹೊಸ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗುವುದು” ಎಂದರು.

ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿಗಳಿಂದ ಸಭೆ: ”ಆರ್​​ಬಿಐ ಅಧಿಕಾರಿಗಳು, ನಬಾರ್ಡ್ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.‌ ಮೈಕ್ರೋ ಫೈನಾನ್ಸ್ ಸಂಘದವರಿಂದ ಹಾಗೂ ಆರ್​​ಬಿಐ ಪ್ರತಿನಿಧಿಗಳಿಂದ ಅಭಿಪ್ರಾಯ ಕೇಳಿದ್ದೇನೆ.‌ ಅವರ ಅಭಿಪ್ರಾಯ ಕೇಳಿದ ಮೇಲೆ ಯಾರೂ ಕೂಡ ಸಾಲ ಕೊಡಬೇಡಿ, ವಸೂಲು ಮಾಡಬೇಡಿ ಅಂತ ಹೇಳಲ್ಲ. ಆದರೆ, ವಸೂಲು ಮಾಡುವಾಗ ಕಿರುಕುಳ ನೀಡಬಾರದು‌, ವಸೂಲಿ ಮಾಡುವಾಗ ಆರ್​​ಬಿಐ ನಿಯಮ ಪಾಲಿಸಲು ಸೂಚನೆ ನೀಡಿದ್ದೇನೆ. ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಸಭೆ ನಡೆಸಿ ಈ ಕುರಿತ ಜನರಿಗೆ ಸೂಕ್ತ ತಿಳಿವಳಿಕೆ ಹಾಗೂ ಮೈಕ್ರೋ ಫೈನಾನ್ಸ್​ನವರಿಗೆ ಎಚ್ಚರಿಕೆ ನೀಡಬೇಕು” ಎಂದು ತಿಳಿಸಿದರು.‌

ಡಿಸಿ ಕಚೇರಿಯಲ್ಲಿ ಸಹಾಯವಾಣಿ: ”ಈ ಬಗ್ಗೆ ಪ್ರತಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಒಂದು ಸಹಾಯವಾಣಿ ತೆರೆಯಲಾಗುವುದು. ಅಲ್ಲಿಗೆ ದೂರು ಕೊಡಬಹುದಾಗಿದೆ. ದೂರಿನ ಮೇಲೆ ಅಥವಾ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡಲಾಗುತ್ತದೆ. ಗೂಂಡಾಗಳನ್ನು ಬಳಸಿ, ಹೆದರಿಸಿ ಬೆದರಿಸಿ ಸಾಲ ವಸೂಲಿ ಮಾಡುವ ಪ್ರಕರಣ ಸಂಬಂಧ ಕಾನೂನು ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇವೆ” ಎಂದು ಮಾಹಿತಿ ನೀಡಿದರು.

[pj-news-ticker]