ಶಿವಮೊಗ್ಗ : ಪದೇ ಪದೇ ಕರ್ಕಶ ಹಾರ್ನ್ ಹಾಕುವ ಮೂಲಕ ಜನರಿಗೆ ತೊಂದರೆಯನ್ನು ನೀಡುವ ವಾಹನ ಚಾಲಕರಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ಇಲ್ಲೊಬ್ರು ಟ್ರಾಫಿಕ್ ಪೊಲೀಸ್ ವಿನೂತನ ಪ್ರಯತ್ನವೊಂದನ್ನು ಮಾಡಿದ್ದು, ಕರ್ಕಶ ಹಾರ್ನ್ ಹಾಕಿ ತೊಂದರೆ ನೀಡುವ ಚಾಲಕರಿಗೆ ಅದೇ ಹಾರ್ನ್ ಸದ್ದನ್ನು ಕೇಳಿಸುವ ಮೂಲಕ ವಿನೂತನ ಶಿಕ್ಷೆ ನೀಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಶಿವಮೊಗ್ಗದ ಟ್ರಾಪಿಕ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕರ್ಕಶ ಹಾರ್ನ್ ಹಾಕುವ ವಾಹನ ಚಾಲಕರಿಗೆ ಈ ವಿನೂತನ ಶಿಕ್ಷೆಯನ್ನು ನೀಡಿದ್ದಾರೆ. ಪಿಎಸ್‌ಐ ತಿರುಮಲೇಶ್ ಕರ್ಕಶ ಹಾರ್ನ್ ಹಾಕುವ ವಾಹನ ಚಾಲಕರನ್ನು ತಡೆದು ನಿಲ್ಲಿಸಿ, ಅದೇ ವಾಹನದ ಹಾರ್ನ್ ಸದ್ದನ್ನು ಅವರಿಗೆ ಕೇಳಿಸುವ ಮೂಲಕ ವಿನೂತನ ಶಿಕ್ಷೆ ನೀಡಿದ್ದಾರೆ.
ಈ ಕುರಿತ ವಿಡಿಯೋವನ್ನು vijeshetty ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಕರ್ಕಶ ಶಬ್ಧ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ವಾಹನ ಚಾಲಕರಿಗೆ ತಮ್ಮದೇ ಶೈಲಿಯಲ್ಲಿ ಟ್ರಾಫಿಕ್ ಪೊಲೀಸರಿಂದ ಶಿಕ್ಷೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕರ್ಕಶ ಹಾರ್ನ್ ಹಾಕುವಂತಹ ಚಾಲಕರನ್ನು ಗಾಡಿಯಿಂದ ಕೆಳಗಿಳಿಸಿ, ಅದೇ ಹಾರ್ನ್ ಸದ್ದನ್ನು ಅವರಿಗೆ ಕೇಳಿಸುವ ಮೂಲಕ, ಕಿರಿಕಿರಿ ಆಗ್ತಿದೆ ಅಲ್ವಾ, ಮತ್ತೆ ಯಾಕೆ ಈ ಹಾರ್ನ್ ಬೇಕಿತ್ತು ಎಂದು ವಿನೂತನ ರೀತಿಯಲ್ಲಿ ಶಿಕ್ಷೆ ನೀಡಿದಂತಹ ದೃಶ್ಯವನ್ನು ಕಾಣಬಹುದು.
ಜನವರಿ 20 ರಂದು ಶೇರ್ ಮಾಡಲಾದ ಈ ವಿಡಿಯೋ 3.2 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹೀಗೆ ಕರ್ಕಶ ಹಾರ್ನ್ ಹಾಕುವವರಿಗೆ ದಂಡ ವಿಧಿಸುವುದು ಮಾತ್ರವಲ್ಲದೆ ಅವರ ಲೈಸನ್ಸ್ ರದ್ದು ಮಾಡ್ಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಉತ್ತಮ ರೀತಿಯಲ್ಲಿ ಪಾಠ ಕಲಿಸಿದ್ದೀರಿ ಸರ್ʼ ಎಂದು ಟ್ರಾಫಿಕ್ ಪೊಲೀಸರ ಕೆಲಸವನ್ನು ಶ್ಲಾಘಿಸಿದ್ದಾರೆ. ಇನ್ನೂ ಅನೇಕರು ಟ್ರಾಫಿಕ್ ಪೊಲೀಸರ ಈ ವಿನೂತನ ಪ್ರಯತ್ನಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
