ಭದ್ರಾವತಿ : ಭಾರತದ ಶ್ರೇಣೀಕೃತ ವ್ಯವಸ್ಥೆಯ ವಿರುದ್ಧ 1818ರಲ್ಲಿ ಭೀಮಾತೀರದ ಕೋರೆಗಾಂ ಪ್ರದೇಶದಲ್ಲಿ ಬೆರಳೆಣಿಕೆಯ ಮಹಾರ್ ಸೈನಿಕರು ಬ್ರಾಹ್ಮಣ ಪೇಶ್ವೆಗಳ ಸೈನಿಕರನ್ನು ಸದೆ ಬಡಿದು, ಈ ದೇಶದಲ್ಲಿ ಸಾಮಾಜಿಕ ನ್ಯಾಯ ಪಡೆದ ಸಂಗ್ರಾಮವಾಗಿ ಈ ಹೋರಾಟ ಇತಿಹಾಸದಲ್ಲಿ ದಾಖಲಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಹಾಗೂ ದಲಿತ ಮುಖಂಡ ಶಿವಬಸಪ್ಪ ತಿಳಿಸಿದರು
ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹೊಲೆಯ- ಮಾದಿಗರ ಸಮನ್ವಯ ಸಮಿತಿ ಆಯೋಜಿಸಿದ್ದ ಭೀಮಾ ಕೋರೆಗಾಂ ಸಂಗ್ರಾಮ ಒಂದು ನೆನಪು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭೀಮಾ ಕೋರೆಗಾಂ ಭಾರತದ ಇತಿಹಾಸದ ಪುಟದಲ್ಲಿ ಎಂದಿಗೂ ಅಚ್ಚಳಿಯದೆ ಉಳಿಯಬೇಕಾದ ಯುದ್ಧ ಆಗಬೇಕಿತ್ತು, ದುರಂತವೆಂದರೆ ಆಗಿನ ಕಾಲದ ಬ್ರಾಹ್ಮಣಶಾಹಿ ವ್ಯವಸ್ಥೆ ಈ ಘನ ಘೋರ ಹೋರಾಟವನ್ನು ಇತಿಹಾಸದ ಪುಟದಲ್ಲಿ ದಾಖಲಿಸದೆ ದಲಿತ ರಿಗೆ ಮೋಸ ಮಾಡಿದೆ ಎಂದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಇಂಗ್ಲೆಂಡಿನಲ್ಲಿ ವ್ಯಾಸಾಂಗ ಮಾಡುವಾಗ ಆಂಗ್ಲ ಇತಿಹಾಸಕಾರರು ದಾಖಲಿಸಿದ ಮಾಹಿತಿಯನ್ನು ಆಧರಿಸಿ, ಮಹಾರಾಷ್ಟ್ರದ ಭೀಮಾ ತೀರದ ಕೋರೆಗಾಂ ಸ್ಥಳದಲ್ಲಿ ಹುತಾತ್ಮ ಮಹರ್ ಸೈನಿಕರ ಸ್ಮರಣಾರ್ಥ ಬ್ರಿಟಿಷರು ನಿರ್ಮಿಸಿದ್ದ ಸ್ಮಾರಕವನ್ನು ಗುರುತಿಸಿ, ಇಡೀ ಜಗತ್ತಿಗೆ ಈ ಯುದ್ಧದ ಮಹತ್ವವನ್ನು ಸಾರಿದರು. ಹಾಗಾಗಿ ದಲಿತರು ಗುಲಾಮರಲ್ಲ, ಸ್ವಾಭಿಮಾನಿ ವೀರರು ಎಂಬ ಸತ್ಯವನ್ನು ನಾವು ಅರಿತುಕೊಳ್ಳಬೇಕಿದೆ ಎಂದು ತಿಳಿಸಿದರು
ಸಮಾರಂಭದಲ್ಲಿ ಡಿಎಸ್ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ ಮುಖಂಡರುಗಳಾದ ಭಾನುಪ್ರಸಾದ್, ಉಮಾದೇವಿ, ಧರ್ಮರಾಜು, ಚೆನ್ನಪ್ಪ, ಕಾಂತರಾಜ್, ಪುಟ್ಟರಾಜ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ಛಲವಾದಿ ಸಮಾಜದ ಜಿಲ್ಲಾಧ್ಯಕ್ಷ ಸುರೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಈ ಸಂದರ್ಭದಲ್ಲಿ ಭೀಮ ಕೋರೆಗಾಂ ಯುದ್ಧದ ಸಾಕ್ಷ್ಯ ಚಿತ್ರವನ್ನು ಪ್ರಸ್ತುತಪಡಿಸಲಾಯಿತು.
